ಶ್ರೀನಗರ: ಬರೋಬ್ಬರಿ ಮೂರು ದಶಕಗಳ ಬಳಿಕ ಜಮ್ಮು-ಕಾಶ್ಮೀರದ ಶಾರದಾ ಭವಾನಿ ದೇವಾಲಯವನ್ನು ಪುನಃ ತೆರೆಯಲಾಗಿದೆ. ಕಾಶ್ಮೀರಿ ಪಂಡಿತ ಸಮುದಾಯವು ದೇವಾಲಯದ ಬಾಗಿಲು ಓಪನ್ ಮಾಡಿದೆ.
ಅಪಾರ ಸಂಖ್ಯೆಯ ಹಿಂದೂಗಳು ಹಾಗೂ ಮುಸ್ಲಿಂ ಬಾಂಧವರು ದೇವಲಯಕ್ಕೆ ಭೇಟಿ ನೀಡಿ ಪೂಜೆ-ಪ್ರಾರ್ಥನೆ ಸಲ್ಲಿಸಿದರು. ಜಮ್ಮು-ಕಾಶ್ಮೀರದ ಬುಡ್ಗಮ್ ಜಿಲ್ಲೆಯಲ್ಲಿರುವ ಶಾರದಾ ಭವಾನಿ ದೇವಾಲಯ 35 ವರ್ಷಗಳ ಬಳಿಕ ಮತ್ತೆ ತೆರೆಯಲಾಗಿದೆ ಎಂದು ಬುಡ್ಗಾಮ್ ಶಾರದಾ ಅಸ್ಥಾಪ್ನ ಸಮುದಾಯದ ಅಧ್ಯಕ್ಷ ಸುನಿಲ್ ಕುಮಾರ್ ಭಟ್ ತಿಳಿಸಿದ್ದಾರೆ.
ಇದು ಪಾಕಿಸ್ತಾನದಲ್ಲಿರುವ ಶಾರದಾ ಮಾತಾ ದೇವಾಲಯದ ಒಂದು ಶಾಖೆ. ನಾವು ಬಹಳ ದಿನಗಳಿಂದ ಈ ದೇವಾಲಯವನ್ನು ತೆರೆಯಲು ಬಯಸುತ್ತಿದ್ದೆವು. ಸ್ಥಳೀಯ ಮುಸ್ಲಿಂವರು ಸಹ ದೆವಾಲಯ ತೆರೆಯುವಂತೆ ಹೇಳುತ್ತಿದ್ದರು. 1990ರ ದಶಕದ ಆರಂಭದಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಉಗ್ರರ ಚಟುವಟಿಕೆ ಭುಗಿಲೆದ್ದ ಬಳಿಕ ಸ್ಥಳ ತೊರೆದಿದ್ದ ಕಾಶ್ಮೀರಿ ಪಂಡಿತರ ಕುಟುಂಬಗಳ ಗುಂಪು ತಮ್ಮ ಪೂರ್ವಜರ ಸ್ಥಳಕ್ಕೆ ಮರಳಿದೆ. ದೇವಾಲಯದಲ್ಲಿ ದೇವರ ಪ್ರಾಣ ಪ್ರತಿಷ್ಠೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಮಧ್ಯ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಇಚ್ಕೂಟ್ ಗ್ರಾಮ ಸಾಕ್ಷಿಯಾಯಿತು ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೆಲ ಕಾಶ್ಮೀರಿ ಪಂಡಿತರು ದೇವಾಲಯ ತೆರೆದರು. ಹಳೆದೇವಾಲಯ ಹಾಳಾಗಿರುವುದರಿಂದ ಹೊಸ ದೇವಾಲಯ ನಿರ್ಮಿಸಲು ಜಿಲ್ಲಾಡಳಿತವನ್ನು ಸಂಪರ್ಕಿಸಲಾಯಿತು. ಸ್ಥಳೀಯ ಮುಸ್ಲಿಂರು ನಮ್ಮೊಂದಿಗೆ ಕೈಜೋಡಿಸಿದ್ದರಿಂದ ಪುನಃ ದೇವಾಲಯದ ಬಾಗಿಲು ತೆರೆಯಲು ಸಾಧ್ಯವಾಯಿತು. ಕಣಿವೆ ರಾಜ್ಯದ ಭಾವೈಕ್ಯತೆಯ ಸಂಸ್ಕೃತಿಯನ್ನು ಇದು ತೋರುತ್ತದೆ. ಆರಂಭದಲ್ಲಿ ನಾವು ನಾಲ್ಕು ಜನರಿದ್ದೆವು. ಇಂದು ಇಡೀ ಗ್ರಾಮ ನಮ್ಮೊಂದಿಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಪಂಡಿತ್ ಸಮುದಾಯದ ಜನ ತಮ್ಮ ಮೂಲಸ್ಥಾನಕ್ಕೆ ಮರಳಿರುವುದನ್ನು ನಾವು ಸ್ವಾಗತಿಸುತ್ತೇವೆ. ಅವರು ಈ ಹಳ್ಳಿಯ ನಿವಾಸಿಗಳು. ಕಾಶ್ಮಿರಿ ಪಂಡಿತರು ನಾವು ಒಟ್ಟಿಗೆ ವಾಸಿಸುತ್ತಿದ್ದೆವು. ಜೊತೆಯಲ್ಲಿಯೇ ಊಟ ಮಾಡುತ್ತಿದ್ದೆವು. ಪರಿಸ್ಥಿತಿ ಹದಗೆಟ್ಟಿದ್ದರಿಂದ ಅವರು ಊರು ತೊರೆಯಬೇಕಾದ ಸ್ಥಿತಿ ಬಂದಿತ್ತು. ಈಗ ಮತ್ತೆ ವಾಪಸ್ ಆಗಿರುವುದು ನಮಗೆ ಸಂತೋಷ ತಂದಿದೆ. ಅವರಿಗೆ ಅಗತ್ಯವಿರುವ ಎಲ್ಲಾ ನೆರವನ್ನೂ ನಾವು ನೀಡುತ್ತೇವೆ. ಕಾಶ್ಮೀರ ಕಣಿವೆ ಕಾಶ್ಮೀರಿ ಪಂಡಿತರು-ಮುಸ್ಲಿಂ ಸಮುದಾಯಗಳ ಜನ್ಮಭೂಮಿ ನಾವು ಒಟ್ಟಿಗೆ ಕಳೆದ ಸಮಯವನ್ನು ಮರೆಯಲು ಸಾಧ್ಯವೇ ಇಲ್ಲಾ. ಈ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿರುವುದು ನಮಗೂ ಸಂತೋಷ ತಂದಿದೆ ಎಂದು ಮುಸ್ಲಿಂ ಸಮುದಾಯದ ವೃದ್ಧರೊಬ್ಬರು ತಿಳಿಸಿದ್ದಾರೆ.