ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭೀಕರ ಪ್ರವಾಹ, ಭೂ ಕುಸಿತಕ್ಕೆ ಮೂವರು ಸಾವನ್ನಪ್ಪಿದ್ದಾರೆ. ಮನೆ, ಕಟ್ಟಡಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಹಲವರು ಕಣ್ಮರೆಯಾಗಿದ್ದಾರೆ.
ರಾಂಬನ್ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಂಬನ್ ಜಿಲ್ಲೆಯಲ್ಲಿ ದಿಡೀರ್ ಪ್ರವಾಹದಿಂದಾಗಿ ಭೂ ಕುಸಿತವುಂಟಾಗಿದೆ. 40ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿವೆ. ಕಟ್ಟಡಗಳು ಕುಸಿದು ಬಿದ್ದ ಪರಿಣಾಮ ಅವಸೇಷಗಳಡಿ ಸಿಲುಕಿ ಮೂವರು ಸಾವನ್ನಪ್ಪಿದ್ದಾರೆ.
ಪ್ರವಾಹ ಪರಿಸ್ಥಿತಿ, ಭೂ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಬಂದ್ ಆಗಿದ್ದು, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯಾದ್ಯಂತ ಕಳೆದ ೪೮ ಗಂಟೆಗಳಲ್ಲಿ ಭಾರಿ ಮಳೆಯಾಗಿದ್ದು, ಮುಂದಿನ 24 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆ, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ಮಳೆ, ಪ್ರವಾಹದಿಂದಾಗಿ ಜಮ್ಮು-ಕಾಶ್ಮೀರ-ಶ್ರೀನಗರ ನಡುವಿನ 250 ಕಿ.ಮೀ ಹೆದ್ದಾರಿ ಬಂದ್ ಮಾಡಲಾಗಿದೆ. ನಿರಾಶ್ರಿತರಿಗೆ ಸರ್ಕಾರಿ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಡಳಿತ ನಿರಾಶ್ರಿತರಿಗಾಗಿ ಆಹಾರ ಹಾಗೂ ಅಗತ್ಯ ವಸ್ತುಗಳ ಪೂರೈಕೆ ಮಾಡಿದೆ. ಭಾರತೀಯ ಸೇನೆ, ಎಸ್ ಡಿಆರ್ ಎಫ್, ಸ್ವಯಂ ಸೇವಕರು ಸಂಕಷ್ಟಕ್ಕೀಡಾದ ಜನರ ನೆರವಿಗೆ ಧಾವಿಸಿದ್ದಾರೆ.