ಮನುಷ್ಯರ ಆಯಸ್ಸು ಗಟ್ಟಿ ಇದ್ದರೆ ತಲೆ ಮೇಲೆ ಕಲ್ಲು ಬಂಡೆ ಬಿದ್ದರೂ ಏನೂ ಆಗದು ಎಂಬ ಮಾತಿದೆ. ಇದಕ್ಕೆ ಪುಷ್ಟಿ ನೀಡುವಂತಹ ಹಲವು ಘಟನೆಗಳು ನಡೆದಿದ್ದು, ಅಂತಹ ಪ್ರಕರಣಗಳ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ರೀತಿ ಈಗ ಆಯಸ್ಸು ಗಟ್ಟಿ ಇದ್ದ ಪುಟ್ಟ ಮಗು ಒಂದರ ವಿಡಿಯೋ ವೈರಲ್ ಆಗಿದ್ದು, ಮೇಲಿನ ಮಾತಿಗೆ ಪೂರಕವಾಗಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ (ಈ ಹಿಂದಿನ ಟ್ವಿಟರ್) ಹರಿದಾಡುತ್ತಿರುವ ಈ ವಿಡಿಯೋದಲ್ಲಿ ದಂಪತಿ ತಮ್ಮ ಮಗುವನ್ನು ಕರೆದುಕೊಂಡು ಬೈಕಿನಲ್ಲಿ ಹೋಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಬ್ಯಾಲೆನ್ಸ್ ತಪ್ಪಿ ಮುಂದೆ ಸಾಗುತ್ತಿದ್ದ ಸ್ಕೂಟರ್ ಗೆ ಬೈಕ್ ಡಿಕ್ಕಿಯಾಗಿದ್ದು, ಇದರ ಪರಿಣಾಮ ದಂಪತಿ ಕೆಳಗೆ ಬೀಳುತ್ತಾರೆ. ಆದರೆ ಬೈಕ್ ಮಾತ್ರ ಮಗುವಿನ ಸಮೇತ 500 ಮೀಟರ್ವರೆಗೆ ಮುಂದೆ ಚಲಿಸಿದ್ದು, ಡಿವೈಡರಿಗೆ ಡಿಕ್ಕಿ ಹೊಡೆದು ಅದೃಷ್ಟವಶಾತ್ ಪಕ್ಕದಲ್ಲಿದ್ದ ಪೊದೆಗೆ ಬಿದ್ದಿದೆ.
ಒಂದೊಮ್ಮೆ ಬೈಕ್ ಮುಂದೆ ಚಲಿಸುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದರೆ ಮಗುವಿಗೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಪೊದೆಯಲ್ಲಿ ಬಿದ್ದ ಕಾರಣ ಸಣ್ಣಪುಟ್ಟ ಗಾಯಗಳೊಂದಿಗೆ ಮಗು ಪಾರಾಗಿದೆ. ಕೂಡಲೇ ದಾರಿಹೋಕರು ಮಗುವನ್ನು ಎತ್ತಿ ದಂಪತಿ ವಶಕ್ಕೆ ನೀಡಿದ್ದಾರೆ. ಈ ಎಲ್ಲ ದೃಶ್ಯಾವಳಿ ಬೈಕ್ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮ್ ನಲ್ಲಿ ಸೆರೆಯಾಗಿದ್ದು, ‘ಹಸ್ನಾ ಜರೂರಿ ಹೈ’ ಎಂಬ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದು ಮಗುವಿನ ಅದೃಷ್ಟವನ್ನು ಕೊಂಡಾಡುತ್ತಿದ್ದಾರೆ.
https://twitter.com/HasnaZaruriHai/status/1825934254662176830?ref_src=twsrc%5Etfw%7Ctwcamp%5Etweetembed%7Ctwterm%5E1825934254662176830%7Ctwgr%5E71c4f22d4f32828d9dc27cc5f1b4a2cd957ceed1%7Ctwcon%5Es1_&ref_url=https%3A%2F%2Fm.dailyhunt.in%2Fnews%2Find