ಶಿವಮೊಗ್ಗ: ಸತ್ಯ, ಅಹಿಂಸೆ ಮತ್ತು ಧರ್ಮ ಆಚರಣೆಯ ಮೂಲಕ ಇಡೀ ಸಮಾಜಕ್ಕೆ ಶಕ್ತಿ ನೀಡಿದ ಜೈನ ಸಮಾಜಕ್ಕೆ ನಾವೂ ಶಕ್ತಿ ತುಂಬಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ ಸಮಾಜದ ವಿವಿಧ ಸಂಘಟನೆಗಳು, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಸಂಜೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ಯ, ಅಹಿಂಸೆ ಪರಮೋ ಧರ್ಮ ಎಂದು ನಂಬಿರುವ ಜೈನರು ಓಡಾಡುತ್ತಲೇ ದೇಶ ಕಟ್ಟಿದವರು. ಅವರ ನಡೆ ಧರ್ಮದ ಕಡೆ ಇರುತ್ತದೆ. ಧರ್ಮ ಆಚರಣೆಯ ಮೂಲಕ ಇಡೀ ಸಮಾಜಕ್ಕೆ ಶಕ್ತಿ ನೀಡಿದ ಜೈನ ಸಮಾಜದದೊಂದಿಗೆ ನಾವೆಲ್ಲ ಇರಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜದವರು ಸೇರಿ ಈ ಜಯಂತಿ ಆಚರಣೆ ಮಾಡಬೇಕು. ಅಶಾಂತಿ, ಅಸೂಯೆ, ಅವಿಶ್ವಾಸಕ್ಕೆ ಕಾರಣ ನಾವೆಲ್ಲ ಒಗ್ಗಟ್ಟಾಗಿಲ್ಲದಿರುವುದು. ನಾವೆಲ್ಲ ಒಗ್ಗೂಡಬೇಕು. ಅಹಿಂಸೆ ಬಹು ದೊಡ್ಡ ಅಸ್ತ್ರ. ನಾವೆಲ್ಲ ಇದನ್ನು ಅಳವಡಿಸಿಕೊಳ್ಳಬೇಕು. ಆಸೆಯೇ ದುಖಕ್ಕೆ ಕಾರಣ ಎಂದು ಮಹಾವೀರರು ಹೇಳಿದ್ದು ಅವರು ತೋರಿರುವ ಮಾರ್ಗದಲ್ಲಿ ನಡೆಯಬೇಕು. ಜೈನ ಸಮುದಾಯದವರು ಸ್ನೇಹಜೀವಿಗಳು, ಆರ್ಥಿಕ ಸುಧಾರಣೆಯಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.
ಶಿವಮೊಗ್ಗ ಡಿ.ವಿ.ಎಸ್. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಅಶೋಕಕುಮಾರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಭಗವಾನ್ ಮಹಾವೀರರು ಸಮಾಜಕ್ಕೆ ತೋರಿದ ಸನ್ಮಾರ್ಗ ಎಷ್ಟು ಪ್ರಮುಖವಾಗಿದ್ದು ಎಂಬುದನ್ನು ನಾವು ಸ್ಮರಿಸಬೇಕು. ಅವರ ಉಪದೇಶಗಳನ್ನು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕ್ರಿ ಪೂ ೫೯೯ ರಲ್ಲಿ ಬಿಹಾರ ಭಾಗದ ಕುಂಡಲಪುರದ ಲಿಚ್ಚವಿ ಪ್ರಾಂತ ದಲ್ಲಿ ಜನಿಸಿದ ಇವರು ಜೈನ ಸಮಾಜದ ೨೪ ನೇ ಅಂದರೆ ಕೊನೆಯ ತೀರ್ಥಂಕರರು. ಸಮಾಜದಲ್ಲಿ ವಿವಿಧ ಕಾಲಘಟ್ಟದಲ್ಲಿ ಉದ್ಭವಿಸಿದ ಅಂಧಕಾರ, ಅಜ್ಞಾನ ಹೋಗಲಾಡಿಸಲು ಕ್ರಿಯಾಶೀಲ ಮಹಾಪುರುಷರ ಜನನ ಆಗುತ್ತದೆ. ಹೀಗೆ ಮಹಾವೀರರ ಜನನ ಆಗುತ್ತದೆ. ಬುದ್ದ ಹಾಗೂ ಮಹಾವೀರರು ಸಮಕಾಲೀನರು. ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಶಾಂತಿ, ಹಿಂಸೆ, ದ್ವೇಷ ತೊಡೆದು ಶಾಂತಿ ನೆಲೆಸಲು ಮುಂದಾಗುತ್ತಾರೆ. ಬಾಲ್ಯಾವಸ್ಥೆಯಲ್ಲಿಯೇ ಹಿಂಸೆ, ದ್ವೇಷ, ಅಶಾಂತಿ ನಿವಾರಣೆ ಮಾಡಲು ಸಂಕಲ್ಪ ಮಾಡಿಕೊಳ್ಳುತ್ತಾರೆ. ಯೌವನಾವಸ್ಥೆಯಲ್ಲಿ ವೈರಾಗ್ಯದತ್ತ ಸಾಗುತ್ತಾರೆ. ಮುನಿ ಧೀಕ್ಷೆ ಪಡೆದು ೧೨ ವರ್ಷ ತಪಸ್ಸಿನಿಂದ ಕೇವಲ ಜ್ಞಾನ ಪಡೆಯುತ್ತಾರೆ. ೩೦ ವರ್ಷ ಧರ್ಮೋಪದೇಶ ಮಾಡುತ್ತಾರೆ. ಮುಕ್ತಿ ಮಾರ್ಗದತ್ತ ನಡೆಯುತ್ತಾ ಇತರಿರಿಗೂ ಮಾರ್ಗದರ್ಶನ ಮಾಡುತ್ತಾರೆ. ಜೀವಿಸು, ಇತರರನ್ನೂ ಜೀವಿಸಲು ಬಿಡು ಎಂದು ಸಾರುತ್ತಾರೆ. ಪಂಚವ್ರತಗಳಾದ ಅಹಿಂಸೆ, ಸತ್ಯ, ಆಸ್ತೇಯ, ಬ್ರರ್ಹಚರ್ಯ ಮತ್ತು ಅಪರಿಗ್ರಹ ವ್ರತವನ್ನು ಬೋಧಿಸುತ್ತಾರೆ. ಅನೇಕಾಂತ ವಾದ ಪ್ರತಿಪಾದಿಸುತ್ತಾರೆ ಎಂದರು.
ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಮಾತನಾಡಿದರು. ದಿಗಂಬರ ಜೈನ ಸಂಘದ ಅಧ್ಯಕ್ಷ ಜಯರಾಜ ಬಿ.ಪಾಂಡಿ, ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ದೇವಿಚಂದ್ ಷಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ ಭೂಮರಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಅಶೋಕ ಕುಮಾರ್ ವಂದಿಸಿದರು.