ಬೆಂಗಳೂರು: ಪತ್ನಿಗೆ ಜೀವನಾಂಶ ಪಾವತಿಸದ ವಿಚಾರವಾಗಿ ಪತಿಗೆ ಹೆಚ್ಚುವರಿಯಾಗಿ ಎರಡು ತಿಂಗಳು ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.
ವಿಚಾರಣೆ ನ್ಯಾಯಾಲಯದ ಆದೇಶ ಪ್ರಶ್ನಿಸಿ ಚಂದ್ರಶೇಖರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಪ್ರಕರಣದಲ್ಲಿ ಪತ್ನಿಯು ಮೊದಲ 24 ತಿಂಗಳ ಜೀವನಾಂಶದ ಬಾಕಿ ವಸೂಲಿ ಮಾಡಲು ಅರ್ಜಿ ಸಲ್ಲಿಸಿದ್ದರು. ಆಗ ನ್ಯಾಯಾಲಯ ಅರ್ಜಿದಾರರಿಗೆ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದು, ಕಾನೂನು ಬದ್ಧ ಆದೇಶ. ಆದರೆ, ಪತ್ನಿ ತದನಂತರ ಅದೇ 24 ತಿಂಗಳ ಬಾಕಿ ಮೊತ್ತ ವಸೂಲಿಗೆ ಎರಡನೆಯ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಂತೆ ಎರಡು ತಿಂಗಳು ಶಿಕ್ಷೆ ವಿಧಿಸಿರುವುದು ಕಾನೂನಿನ ಅನ್ವಯ ಒಪ್ಪುವಂತಹದಲ್ಲ ಎಂದು ನ್ಯಾಯಪೀಠ ಹೇಳಿದೆ.
ಒಂದು ವೇಳೆ ಸಂಪೂರ್ಣ ಮೊತ್ತ ಬಾಕಿ ಇದ್ದು, ಪಾವತಿಸದಿದ್ದಲ್ಲಿ ಜೈಲು ಶಿಕ್ಷೆಯನ್ನು ಒಂದು ತಿಂಗಳವರೆಗೆ ವಿಸ್ತರಿಸಬಹುದಾಗಿದೆ. ಪ್ರತಿ ತಿಂಗಳ ಜೀವನಾಂಶ ನಿರ್ವಹಣೆ ಮೊತ್ತದ ಬಿಡುಗಡೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು. ಆದರೂ ಸಂಪೂರ್ಣ ಬಾಕಿ ಬಿಡುಗಡೆಗೆ ಅರ್ಜಿ ಸಲ್ಲಿಸಿದರೆ ಜೈಲು ಶಿಕ್ಷೆ ಒಂದು ತಿಂಗಳು ಮೇಲೆ ಇರಬಾರದು ಎಂದು ಹೇಳಲಾಗಿದೆ. ಆದರೆ ಜೀವನಾಂಶದ ಬಾಕಿ ಕೋರಿರುವ ಒಂದೇ ಅರ್ಜಿಗೆ ನಿಗದಿತ ಅವಧಿ ಮೀರಿ ಬಂಧನದಲ್ಲಿಡುವುದು ಕಾನೂನುಬಾಹಿರವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.