ಬೆಂಗಳೂರು: ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಬಹುಭಾಷ ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಸಂಘಟನೆಗಳು ಕಮಲ್ ಹಾಸನ್ ತಮ್ಮ ಹೇಳಿಕೆ ಹಿಂಪಡೆದು ಕನ್ನಡಿಗರ ಕ್ಷಮೆ ಕೇಳದಿದ್ದರೆ ರಾಜ್ಯದಲ್ಲಿ ಅವರ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ನಡುವೆ ಕನ್ನಡದ ಹಿರಿಯ ನಟ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ನಟ ಕಮಲ್ ಹಾಸನ್ ಗೆ ಚಾಟಿ ಬೀಸಿದ್ದಾರೆ.
ನಟ ಕಮಲ್ ಹಾಸನ್ ಅವರ ಉದ್ಧಟತನದ ಹೇಳಿಕೆಗೆ ಕೆಲವು ಕನ್ನಡ ನಟ-ನಟಿಯರು ಸಮಾಧಾನ ವ್ಯಕ್ತಪಡಿಸಿದ್ದರೆ, ಮತ್ತೆ ಹಲವರು ಮೌನವಹಿಸಿದ್ದಾರೆ. ನಟ ಜಗ್ಗೇಶ್, ಕಮಲ್ ಹಾಸನ್ ಅವರಿಗೆ ಕನ್ನಡದ ಪುರಾತನ ಇತಿಹಾಸದ ಪಾಠದ ಜೊತೆಗೆ ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.
ಕಲೆಗೆ ಜಾತಿ ಇಲ್ಲಾ. ಎಲ್ಲಾಭಾಷೆಯ ಕಲಾವಿದರು ಶಾರದಾಸುತರು ಒಪ್ಪುತ್ತೇವೆ, ಆ ನಿಟ್ಟಿನಲ್ಲಿ ಕಮಲ್ ಹಾಸನ್ ರವರ ಮೆಚ್ಚಿದ್ದೇವೆ. ಅಂದ ಮಾತ್ರಕ್ಕೆ ಕನ್ನಡ ತಮಿಳಿಂದ ಹುಟ್ಟಿದೆ ಎಂದ ಅವರ ಮಾತು ಒಪ್ಪೋಲ್ಲಾ!
ಕನ್ನಡಕ್ಕೆ 2.5ಸಾವಿರ ವರ್ಷಗಳ ಇತಿಹಾಸವಿದೆ. ಅಷ್ಟೇಕೆ ಹನುಮದೇವರು ಕನ್ನಡ ಕಲಿಪುಂಗವ ಅವರ ಕಾಲ ರಾಮಾಯಣ ಇಷ್ಟು ಅರ್ಥವಾದರೆ ಸಾಕಲ್ಲವೆ ಸಾರ್..! ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.