ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಜೈಲಿನಲ್ಲಿ ಸೌಲಭ್ಯ ಒದಗಿಸುವ ವಿಚಾರದ ಕುರಿತಾಗಿ ಕೋರ್ಟ್ ಸೂಚನೆ ನೀಡಿದೆ. ದರ್ಶನ್ ಸೇರಿ ಇತರೆ ಆರೋಪಿಗಳಿಗೆ ಹರಿದ ಕಂಬಳಿ ನೀಡಿರುವುದು ನಾಚಿಕೆಗೇಡು ಎಂದು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಕ್ರಮಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಜನಸಾಮಾನ್ಯರ ಬಗ್ಗೆ ಅವರಿಗೆ ಸ್ವಲ್ಪ ಮಾನವೀಯತೆ ಇರಬೇಕು. ಚಳಿಯಿಂದ ರಕ್ಷಣೆಗೆ ಗುಣಮಟ್ಟದ ಹೊಸ ಕಂಬಳಿ, ಬಟ್ಟೆ ಒದಗಿಸಬೇಕು. ತಿಂಗಳಿಗೊಮ್ಮೆ ಕಂಬಳಿ ಮತ್ತು ಬಟ್ಟೆ ಶುಚಿಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.
ಕೈದಿಗಳ ಭದ್ರತೆ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ. ಬೇರೆ ಬ್ಯಾರಕ್ ಗೆ ಸ್ಥಳಾಂತರ ಮಾಡುವಂತೆ ಆರೋಪಿಗಳು ಕೋರಿದ್ದಾರೆ. ಸಾಧ್ಯವಿದ್ದರೆ ಭದ್ರತೆ ಇರುವ ಬೇರೆ ಬ್ಯಾರಕ್ ಗೆ ಸ್ಥಳಾಂತರ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.
ಈ ಕುರಿತಾಗಿ ಜೈಲು ಅಧೀಕ್ಷಕರಿಗೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಈರಪ್ಪಣ್ಣ ಪವಾಡಿನಾಯ್ಕ್ ಸೂಚನೆ ನೀಡಿದ್ದಾರೆ. ಉಳಿದ ವಿಚಾರಗಳ ಬಗ್ಗೆ ಜೈಲು ಅಧಿಕಾರಿಗಳ ವಿವರಣೆ ಸಮಾಧಾನಕರವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಶೀಘ್ರ ಸಾಕ್ಷ್ಯ ವಿಚಾರಣೆಗೆ ಕೋರಿದ್ದ ಅರ್ಜಿ ವಿಚಾರದ ಬಗ್ಗೆ ದೋಷಾರೋಪ ಹೊರಿಸಲು ಕೋರ್ಟ್ ನಿಂದ ವಿಳಂಬವಾಗಿಲ್ಲ. ಈ ಬಗ್ಗೆ ಮೆಮೊ ಸಲ್ಲಿಸುವ ಅಗತ್ಯವಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
