ಬೆಂಗಳೂರು : ರಾಜ್ಯ ಸರ್ಕಾರದ ಡಿ-ಗ್ರೂಪ್ ನೌಕರರು, ವಾಹನ ಚಾಲಕರು ಸಮವಸ್ತ್ರ, ಗುರುತಿನ ಚೀಟಿ ಧರಿಸುವುದು ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರ ಸಚಿವಾಲಯದ ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹು ಮಹಡಿ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವಾಹನ ಚಾಲಕರು ಹಾಗೂ ಗ್ರೂಪ್-ಡಿ ವೃಂದದ ನೌಕರರು ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರ ಮತ್ತು ಗುರುತಿನ ಚೀಟಿಗಳನ್ನು ಧರಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದರಿಂದ ಸಾರ್ವಜನಿಕರು ಮತ್ತು ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಗುರುತಿಸುವುದು ಸಾಧ್ಯವಾಗುತ್ತಿಲ್ಲ. ಇದರಿಂದ ಶಿಸ್ತಿನ ಉಲ್ಲಂಘನೆ ಆಗುತ್ತಿರುತ್ತದೆ.
ಕರ್ನಾಟಕ ಸರ್ಕಾರ ಸಚಿವಾಲಯ ಕೈಪಿಡಿ(2005) ರ ಕಂಡಿಕೆ-48ರಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಡಿ ವೃಂದದ ನೌಕರರ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿರುತ್ತದೆ. ಅದರಂತೆ, ಕಚೇರಿ ಜ್ಞಾಪನ ಸಂಖ್ಯೆ:ಡಿಪಿಎಆರ್ 44 ಎಎಆರ್ 75 ದಿನಾಂಕ: 12.09.1980ರ ಅನುಬಂಧದಲ್ಲಿ ಈ-ಗುಂಪಿನ ಸಿಬ್ಬಂದಿ ವರ್ಗದ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳನ್ನು ನಿಗದಿಪಡಿಸಲಾಗಿರುತ್ತದೆ.ಸದರಿ ಜ್ಞಾಪನದಂತೆ ಗ್ರೂಪ್-ಡಿ ವೃಂದದ ಎಲ್ಲಾ ನೌಕರರು ಸಮವಸ್ತ್ರ ಧರಿಸಿ ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ.
ಎಲ್ಲಾ ರೀತಿಯ ನೌಕರರು ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ನಿರೀಕ್ಷಿಸುವುದು ಸರ್ಕಾರದ ಕಾರ್ಯನೀತಿಯಾಗಿರುವ ಕಾರಣ, ವಾಹನ ಚಾಲಕರು ಮತ್ತು ಮತ್ತು ಡಿ-ಗುಂಪಿನ ಯಾರೇ ನೌಕರನು ತಾನು ಮಾಡಬೇಕಾದ ಯಾವುದೇ ಕರ್ತವ್ಯವನ್ನು ನಿರಾಕರಿಸಿದಲ್ಲಿ 1957ರ ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ, ಅಪೀಲು) ನಿಯಮಾವಳಿಯ ಮೇರೆಗೆ ಕ್ರಮಕ್ಕೆ ಒಳಗಾಗತಕ್ಕದ್ದು.ಸರ್ಕಾರದ ಆದೇಶ ಸಂಖ್ಯೆ:ಆಇ 24 ಎಸ್ಆರ್ಪಿ 2018 ( 111) ದಿನಾಂಕ:11.01.2019ರಲ್ಲಿ ರಾಜ್ಯ ಸರ್ಕಾರದ ವಿವಿಧ ವರ್ಗದೆ ಹುದ್ದೆಗಳಿಗೆ ಲಭ್ಯವಿರುವ ಸಮವಸ್ತ್ರ ಭತ್ಯೆಯ ದರಗಳನ್ನು ದಿನಾಂಕ:01.01.2019ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ ಆದೇಶಿಸಲಾಗಿದೆ. ಅದರಂತೆ ಸರ್ಕಾರದ ಎಲ್ಲಾ ಹಿರಿಯ ವಾಹನ ಚಾಲಕರು/ಚಾಲಕರು ಎಲ್ಲಾ ಗ್ರೂಪ್ಡಿ ಸಿಬ್ಬಂದಿಗೆ ಮಾಸಿಕ ಸಮವಸ್ತ್ರ ನಿರ್ವಹಣಾ ಭತ್ಯೆ ರೂ.400/-ಗಳನ್ನು ಮಂಜೂರು ಮಾಡಲಾಗಿದೆ.
ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವಾಹನ ಚಾಲಕರು ಹಾಗೂ ಗ್ರೂಪ್-ಡಿ ವೃಂದದ ನೌಕರರಿಗೆ ಇನ್ನು ಮುಂದೆ ಈ ಕೆಳಕಂಡಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಅ) ಪ್ರತಿಯೊಬ್ಬ ಹಿರಿಯ ವಾಹನ ಚಾಲಕ/ಚಾಲಕರು, ಗ್ರೂಪ್-ಡಿ ನೌಕರರು ಕರ್ತವ್ಯದ ಮೇಲಿದ್ದಾಗ ಕಡ್ಡಾಯವಾಗಿ ಸಮವಸ್ತ್ರವನ್ನು ಮತ್ತು ಗುರುತಿನ ಚೀಟಿಯನ್ನು ಧರಿಸತಕ್ಕದ್ದು.


