
ಬೆಂಗಳೂರು: ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಕೂಡ.ನಾಡಿನ ಪ್ರವಾಸಿ ತಾಣಗಳಿಗೆ ಭೇಟಿನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ ಮೂಲಸೌಲಭ್ಯ ಮತ್ತು ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯಕ್ಷೇತ್ರಗಳ ತೊಟ್ಟಿಲು ಕರ್ನಾಟಕಕ್ಕೆ ಸ್ವಾಗತ ಎಂದು ಹೇಳಿದ್ದಾರೆ.
ರಾಜ್ಯದ ಹೊಯ್ಸಳ ದೇವಾಲಯಗಳು ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ನಮ್ಮ ಭವ್ಯ ಇತಿಹಾಸಕ್ಕೆ ಸಿಕ್ಕಿರುವ ಮಹತ್ವದ ಗರಿ. ಬೇಲೂರು, ಹಳೇಬೀಡು, ಸೋಮನಾಥಪುರದಲ್ಲಿರುವ ಹೊಯ್ಸಳ ದೇವಾಲಯಗಳ ಸುಂದರ ಕೆತ್ತನೆ ಎಂಥವರನ್ನೂ ಮೂಕ ವಿಸ್ಮಿತರಾಗಿಸಬಲ್ಲದು. ಶ್ರೀಮಂತ ಇತಿಹಾಸವಿರುವ ಕರುನಾಡಿಗೆ ತಮಗೆಲ್ಲಾ ಆತ್ಮೀಯ ಸ್ವಾಗತ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
