ಅಮೃತಸರ: ಪಾಕಿಸ್ತಾನದ ಐಎಸ್ ಐ ಬೆಂಬಲಿತ ಹ್ಯಾಂಡ್ಲರ್ ಗಳಿಂದ ನಿರ್ವಹಿಸಲ್ಪಡುತ್ತಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರ ಕಳ್ಳ ಸಾಗಾಣೆ ಜಾಲ ಪತ್ತೆಯಾಗಿದ್ದು, ಐವರನ್ನು ಬಂಧಿಸಲಾಗಿದೆ.
ಈ ಬಗ್ಗೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ. ಬಂಧಿತರಿಂದ ಎಕೆ ಸೈಗಾ 308 ಅಸಾಲ್ಟ್ ರೈಫಲ್, ಎರಡು ಮ್ಯಾಗಜೀನ್, ಎರಡು ಎಂಎಂ ಗ್ಲಾಕ್ ಪಿಸ್ತೂಲ್, ಎಕೆ ರೈಫಲ್ ಗಳನ್ನು, 90 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ 7.50 ಲಕ್ಷ ನಗದು, ಒಂದು ಕಾರು ಮತ್ತು ಮೂರು ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳು ಪಾಕಿಸ್ತಾನದ ಐಎಸ್ ಐ ಕಾರ್ಯಕರ್ತರ ಜೊತೆ ನೇರ ಸಂಪರ್ಕಹೊಂದಿದ್ದರು. ವಶಕ್ಕೆ ಪಡೆದಿರುವ ಶಸ್ತ್ರಾಸ್ತ್ರಗಳನ್ನು ಗ್ಯಾಂಗ್ಸ್ಟರ್ ಜಗ್ಗು ಭಗವಾನ್ ಪುರಿಯಾ ಸಹಚರ ನವ್ ಪಂಡೋರಿಗೆ ತಲುಪಿಸುವ ಉದ್ದೇಶವಿತ್ತು ಎಂದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.