ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಿಂದ ತತ್ತರಿಸಿರುವ ಬೆಂಗಳೂರಿನ ಸಮಸ್ಯೆಯ ಬಗ್ಗೆ ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ನೇರವಾಗಿ ಪೊಲೀಸ್ ಅಧಿಕಾರಿಗಳನ್ನೇ ಪ್ರಶ್ನಿಸಿದ್ದಾರೆ. ತಮ್ಮ WTF ಪಾಡ್‌ಕ್ಯಾಸ್ಟ್‌ನಲ್ಲಿ ಪೊಲೀಸ್ ಆಯುಕ್ತ ಬಿ ದಯಾನಂದ ಮತ್ತು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ ಎನ್ ಅನುಚೇತ್ ಅವರೊಂದಿಗೆ ಮಾತನಾಡಿದ ಕಾಮತ್, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕಾರಣವೇನು ಮತ್ತು ಪರಿಹಾರವೇನು ಎಂದು ಕೇಳಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಬಗ್ಗೆ ತಮಗಿರುವ ಬೇಸರವನ್ನು ವ್ಯಕ್ತಪಡಿಸಿದ ನಿಖಿಲ್ ಕಾಮತ್, ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರದ ಬಗ್ಗೆ ಅಧಿಕಾರಿಗಳಿಂದಲೇ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, 2000 ರ ನಂತರ ಐಟಿ ಉದ್ಯಮದ ಬೆಳವಣಿಗೆಯಿಂದ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಮತ್ತು ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಅದಕ್ಕೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿ ಆಗಿಲ್ಲ ಎಂದು ವಿವರಿಸಿದ್ದಾರೆ.
ಅಂಕಿಅಂಶಗಳೊಂದಿಗೆ ಮಾತನಾಡಿದ ಅನುಚೇತ್, ಬೆಂಗಳೂರಿನಲ್ಲಿ 1.5 ಕೋಟಿ ಜನಸಂಖ್ಯೆಗೆ 1.23 ಕೋಟಿ ನೋಂದಾಯಿತ ವಾಹನಗಳಿವೆ. ಇದು ಮುಂಬೈ ಮತ್ತು ದೆಹಲಿಗಿಂತಲೂ ಹೆಚ್ಚಿನ ವಾಹನ ಸಾಂದ್ರತೆ. ವಾಹನಗಳ ವಾರ್ಷಿಕ ಬೆಳವಣಿಗೆ ದರ ಶೇಕಡಾ 8 ರಷ್ಟಿದ್ದು, 2013 ರಿಂದ 2023 ರ ನಡುವೆ ವಾಹನಗಳ ಸಂಖ್ಯೆ ದ್ವಿಗುಣಗೊಂಡಿದೆ. ಇಂತಹ ಬೆಳವಣಿಗೆಗೆ ಮೂಲಸೌಕರ್ಯವನ್ನು ಒದಗಿಸುವುದು ಕಷ್ಟಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸ್ ಆಯುಕ್ತರು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕೊರತೆಯ ಬಗ್ಗೆಯೂ ಮಾತನಾಡಿದರು. ಮೆಟ್ರೋ ಬರುವ ಮೊದಲು ಬಿಎಂಟಿಸಿ ಬಸ್ಸುಗಳು ಮಾತ್ರ ಇದ್ದವು. ಕೋಲ್ಕತ್ತಾದಲ್ಲಿ ಟ್ರಾಮ್ ಮತ್ತು ದೆಹಲಿಯಲ್ಲಿ ಮೆಟ್ರೋ ಇದ್ದಂತೆ ಬೆಂಗಳೂರಿನಲ್ಲಿ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರಲಿಲ್ಲ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಕಾಮತ್, ತಮ್ಮ ಮನೆಯ ಬಳಿ ಕಳೆದ 10 ವರ್ಷಗಳಿಂದ ಮೆಟ್ರೋ ಕಾಮಗಾರಿ ನಡೆಯುತ್ತಿರುವುದನ್ನು ಉಲ್ಲೇಖಿಸಿದರು. ಬಾಡಿಗೆ ಮನೆಯಲ್ಲಿರುವುದೇ ಉತ್ತಮ ಎಂಬ ತಮ್ಮ ಹಿಂದಿನ ತೀರ್ಮಾನವನ್ನು ಬದಲಿಸಿ ಕಳೆದ ವರ್ಷ ಬೆಂಗಳೂರಿನಲ್ಲಿ ಮನೆಯೊಂದನ್ನು ಖರೀದಿಸಿರುವುದಾಗಿಯೂ ಅವರು ಬಹಿರಂಗಪಡಿಸಿದರು.