BIG NEWS: ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ: ಡಿಸಿಎಂ ಡಿ.ಕೆ.ಶಿವಕುಮಾರ್

ನವದೆಹಲಿ: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ಕೇಂದ್ರಕ್ಕೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನವದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕುಡಿಯುವ ನೀರಿನ ಉದ್ದೇಶದ ಎತ್ತಿನಹೊಳೆ ಯೋಜನೆಗೆ ಶೇ.25 ರಷ್ಟು ಆರ್ಥಿಕ ಸಹಾಯ, ಕಳಸಾ ಬಂಡೂರಿ ಯೋಜನೆ, ಕೃಷ್ಣಾ ನದಿ ನೀರಿನ ವಿಚಾರವಾಗಿ ಕೇಂದ್ರ ಜಲಶಕ್ತಿ ಹಾಗೂ ಪರಿಸರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗಿದೆ ಎಂದರು.

ಒಟ್ಟು ಆರು ನೀರಾವರಿ ಯೋಜನೆಗಳಾದ ಸೊನ್ನತಿ ಏತ ನೀರಾವರಿ ಯೋಜನೆಗೆ ₹ 804.66 ಕೋಟಿ, ಯುಕೆಪಿಯ ಇಂಡಿ ಶಾಖಾ ಕಾಲುವೆಗೆ ₹2,666.70 ಕೋಟಿ, ಮಲಪ್ರಭಾ ಕಾಲುವೆ ಮೂರನೇ ಹಂತಕ್ಕೆ ₹3000 ಕೋಟಿ, ಘಟಪ್ರಭಾ ಬಲದಂಡೆ ಕಾಲುವೆ ಮತ್ತು ಚಿಕ್ಕೋಡಿ ಶಾಖಾ ನಾಲೆಗೆ ₹1,444.42 ಕೋಟಿ, ಬೆಣ್ಣೆಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನಿರ್ವಹಣೆಗಾಗಿ ₹1,610 ಕೋಟಿ ಸೇರಿದಂತೆ ಒಟ್ಟು ₹11,122.76 ಕೋಟಿ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಇದರಲ್ಲಿ ಒಂದಕ್ಕೆ ಅನುದಾನ ನೀಡಲಾಗಿದೆ ಎಂಬ ಮಾಹಿತಿ ಬಂದಿದೆ. ಆದರೆ ನಮಗೆ ಇನ್ನು ಅಧಿಕೃತವಾಗಿ ತಿಳಿಸಿಲ್ಲ” ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆಯನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಎಂದು ಅನುಮೋದಿಸಿ ಶೇ.25 ರಷ್ಟು ಆರ್ಥಿಕ ಸಹಾಯ ನೀಡಬೇಕಾಗಿ ಮನವಿ ಮಾಡಿದ್ದೇನೆ. ಈ ಯೋಜನೆ ಕಾಮಗಾರಿಯನ್ನು ತುಮಕೂರು ಹಾಗೂ ಹಾಸನ ಭಾಗದಲ್ಲಿ ನಿಲ್ಲಿಸಲಾಗಿತ್ತು. ಯೋಜನೆ ಹಾದು ಹೋಗುವ ಕಡೆ ಕಂದಾಯ ಭೂಮಿ ಹೊಂದಿದ್ದ ರೈತರಿಗೆ ಪೋಡಿ ವಿತರಣೆ ಮಾಡಿ ಪರಿಹಾರವನ್ನೂ ನೀಡಲಾಗಿತ್ತು. ಆದರೆ ತದ ನಂತರ ಅರಣ್ಯ ಇಲಾಖೆಯವರು ಇದು ನಮ್ಮ ಭೂಮಿ ಎಂದು ತಕರಾರು ತೆಗೆದರು. ಅವರ ಬಳಿ ಸಂಘರ್ಷ ಬೇಡ ಎಂದು ಬದಲಿ ಭೂಮಿ ನೀಡಿದ್ದೇವೆ. ಇದಕ್ಕೆ ಅರಣ್ಯ ಇಲಾಖೆಯವರು ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಬೇಕಿತ್ತು, ಆದರೆ ಮಾಡಿಲ್ಲ. ಕೆಲವು ತಕರಾರುಗಳನು ಹಾಕಿದ್ದಾರೆ. ಈಗಾಗಲೇ ಕೇಂದ್ರ ಸಚಿವರನ್ನು ಮೂರು ಬಾರಿ ಭೇಟಿ ಮಾಡಲಾಗಿತ್ತು ಆದರೂ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಕಾಲುವೆ ತೆಗೆದಾಗ ಬರುವ ಮಣ್ಣನ್ನು ಇಲ್ಲಿಯೇ ಹಾಕಲಾಗುತ್ತಿದೆ. ಬದಲಾಗಿ 25 ಕಿಲೋ ಮೀಟರ್ ದೂರ ಹಾಕಿ ಎಂಬುದು ಅವರ ಪ್ರಮುಖ ತಕರಾರು. ಕೇಂದ್ರ ಸಚಿವರು ಸದ್ಯದಲ್ಲೇ ಇದನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ ಎಂದರು.

ಭದ್ರಾ ಮೇಲ್ದಂಡೆ ವಿಚಾರವಾಗಿ ಅನುದಾನ ಕೇಳಿದ್ದೇವೆ. ಕೇಂದ್ರ ಸರ್ಕಾರದಿಂದ ಪರಿಷ್ಕೃತ ಅಂದಾಜು ಪಟ್ಟಿ ಕೇಳಿದ್ದರು ಅದನ್ನು ಕೂಡ ಸಲ್ಲಿಸಿದ್ದೇವೆ. ಈ ಹಿಂದೆ ಹೇಳಿದ್ದ ₹5,300 ಕೋಟಿಗಿಂತಲೂ ಹೆಚ್ಚು ಅನುದಾನದ ಪರಿಷ್ಕೃತ ಪಟ್ಟಿ ಕಳುಹಿಸಿದ್ದೇವೆ. ಈಗಾಗಲೇ ₹10,604 ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದೇವೆ. ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಹಣ ಸರ್ಕಾರದ ಖಾತೆಗೆ ಬರುವವರೆಗೂ ನಂಬಿಕೆಯಿಲ್ಲ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read