‌ʼಐಪಿಎಲ್‌ʼ ನಿಂದ ತಿರಸ್ಕೃತ, ಪಿಎಸ್‌ಎಲ್‌ನಲ್ಲಿ ನಾಯಕ….! ವಾರ್ನರ್‌ಗೆ ಟ್ರೋಲ್ ಬಿಸಿ..!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಯಾವುದೇ ತಂಡದಿಂದ ಖರೀದಿಯಾಗದ ಆಸ್ಟ್ರೇಲಿಯಾದ ಅನುಭವಿ ಆಟಗಾರ ಡೇವಿಡ್ ವಾರ್ನರ್, ಇದೀಗ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ನಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ, ಪಾಕಿಸ್ತಾನಕ್ಕೆ ಆಗಮಿಸಿದ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಐಪಿಎಲ್ ಮತ್ತು ಪಿಎಸ್‌ಎಲ್ ಟೂರ್ನಿಗಳ ದಿನಾಂಕಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

IPL 2025ರ ಹರಾಜಿನಲ್ಲಿ ವಾರ್ನರ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲು ಆಸಕ್ತಿ ತೋರಲಿಲ್ಲ. ಇದರಿಂದ ಬೇಸರಗೊಂಡಿದ್ದ ಅವರು ತಕ್ಷಣವೇ ಪಿಎಸ್‌ಎಲ್ ಡ್ರಾಫ್ಟ್‌ಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಅಲ್ಲಿ ಅವರನ್ನು ಪ್ಲಾಟಿನಂ ವಿಭಾಗದಲ್ಲಿ ಕರಾಚಿ ಕಿಂಗ್ಸ್ ಮೊದಲ ಆಯ್ಕೆಯಾಗಿ ಖರೀದಿಸಿತು. ವಾರ್ನರ್ ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಆಟಗಾರರಾಗಿದ್ದರೂ, ಐಪಿಎಲ್‌ನಲ್ಲಿ ಅವರಿಗೆ ಮನ್ನಣೆ ಸಿಗದಿದ್ದುದು ಅಚ್ಚರಿ ಮೂಡಿಸಿದೆ.

ಕರಾಚಿ ಕಿಂಗ್ಸ್ ತಂಡವು ವಾರ್ನರ್ ಅವರ ಆಗಮನದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ಬಹುತೇಕ ನೆಟ್ಟಿಗರು ವಾರ್ನರ್ ಅವರನ್ನು ಟ್ರೋಲ್ ಮಾಡಿದ್ದು, ವಿಚಿತ್ರ ಹೆಸರುಗಳಿಂದ ಕರೆಯುತ್ತಿದ್ದಾರೆ. 38 ವರ್ಷದ ವಾರ್ನರ್ ಈ ಬಾರಿ ಕರಾಚಿ ಕಿಂಗ್ಸ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದೆ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದು, 2016ರಲ್ಲಿ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಸ್ಟ್ರೇಲಿಯಾ ಪರವಾಗಿ 110 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಾರ್ನರ್ 3,277 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ ಒಂದು ಶತಕ ಮತ್ತು 28 ಅರ್ಧಶತಕಗಳಿವೆ. ಇದೀಗ ಪಿಎಸ್‌ಎಲ್‌ನಲ್ಲಿ ಅವರು ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಕರಾಚಿ ಕಿಂಗ್ಸ್ ತಂಡವು ಏಪ್ರಿಲ್ 12 ರಂದು ನ್ಯಾಷನಲ್ ಬ್ಯಾಂಕ್ ಸ್ಟೇಡಿಯಂನಲ್ಲಿ ಮುಲ್ತಾನ್ ಸುಲ್ತಾನ್ಸ್ ವಿರುದ್ಧ ತಮ್ಮ ಅಭಿಯಾನವನ್ನು ಆರಂಭಿಸಲಿದೆ. ವಾರ್ನರ್ ತಮ್ಮ ಬ್ಯಾಟ್‌ನಿಂದ ಉತ್ತರ ನೀಡುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read