ಬೆಂಗಳೂರು: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರಿಗೆ ಬಡ್ಡಿ ರಹಿತ ಸಾಲ, ಉತ್ತಮ ಆರೋಗ್ಯ ಸೇವೆ ದೊರೆಯಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘ 75 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ ಅಮೃತ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಕರ್ತರ ಕಾರ್ಯ ಸವಾಲಿನಿಂದ ಕೂಡಿದೆ. ಬಡ್ಡಿ ರಹಿತ ಸಾಲ ಅವರಿಗೆ ಕೊಡಲೇಬೇಕು. ಮಾನ್ಯತೆ ಪಡೆದ ಪತ್ರಕರ್ತರು ‘ಮಾಧ್ಯಮ ಸಂಜೀವಿನಿ’ ಯೋಜನೆಯ 5 ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ ಪಡೆಯಬಹುದಾಗಿದ್ದು, ಎಲ್ಲ ನೈಜ ಪತ್ರಕರ್ತರಿಗೂ ಇದು ಸಿಗುವಂತಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಪತ್ರಕರ್ತರ ಸಹಕಾರ ಸಂಘ ಇನ್ನಷ್ಟು ಸದೃಢವಾಗಬೇಕು. ಸಂಘಕ್ಕೆ 10 ಕೋಟಿ ರೂಪಾಯಿ ಬಡ್ಡಿ ರಹಿತ ಸಾಲ ನೀಡಲು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ತಕ್ಷಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಅಥವಾ ಬಜೆಟ್ ನಲ್ಲಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ರಮೇಶ್ ಎಂ. ಪಾಳ್ಯ, ಉಪಾಧ್ಯಕ್ಷ ದೊಡ್ಡಬೊಮ್ಮಯ್ಯ, ಖಜಾಂಚಿ ಮೋಹನ್ ಕುಮಾರ್, ನಿರ್ದೇಶಕರಾದ ಆನಂದ್ ಬೈದನಮನೆ, ರಮೇಶ್ ಹಿರೇಜಂಬೂರು ಸೇರಿದಂತೆ ಹಲವರು ಇದ್ದರು.