ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು, ಬೆಳಗಾವಿ ನಗರದ ಜಿಲ್ಲಾ ಔಷಧ ಉಗ್ರಾಣಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಉಗ್ರಾಣದ ಸ್ಟೊರ್ ಹಾಗೂ ಸಿಬ್ಬಂದಿಗಳ ಹಾಜರಾತಿ ಬಗ್ಗೆ ಮಾಹಿತಿ ಪಡೆದು, ಔಷಧ ತಂತ್ರಾಂಶದ ಬಗ್ಗೆ ಸಂಪೂರ್ಣ ವಿವರಣೆ ಪಡೆದುಕೊಂಡು ಪರಿಶೀಲನೆ ಮಾಡಿದರು. ಬೆಳಗಾವಿ ಜಿಲ್ಲೆಯ ಆರೋಗ್ಯ ಸಂಸ್ಥೆಗಳಿಗೆ ಔಷಧಗಳ ಸರಬರಾಜಿನ ಬಗ್ಗೆ ತಿಳಿದುಕೊಂಡು ಆರೋಗ್ಯ ಸಂಸ್ಥೆಗಳ ಬೇಡಿಕೆಗೆ ಅನುಗುಣವಾಗಿ ಸರಬರಾಜು ಆಗುತ್ತಿರುವ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ರೋಗಿಗಳ ಸಂಖ್ಯೆ ಒಂದೇ ರೀತಿಯಾಗಿ ಇರದೇ ಇರುವುದರಿಂದ ರೋಗಿಗಳ ಸಂಖ್ಯೆಗನುಗುಣವಾಗಿ ಹಾಗೂ ಆರೋಗ್ಯ ಸಂಸ್ಥೆಗಳ ಅವಶ್ಯಕತೆಗನುಗುಣವಾಗಿ ಔಷಧಿಗಳನ್ನು ವಿತರಿಸಲು ಉಗ್ರಾಣದ ಪ್ರಭಾರಧಾರಕರಿಗೆ ನಿರ್ದೇಶನ ನೀಡಿದರು. ಔಷಧಗಳ ಅವಧಿ ಮೀರದಂತೆ ನಿಗಾವಹಿಸುವುದು ಹಾಗೂ ಅವಧಿ ಮೀರಿದ ಔಷಧಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ ವಹಿಸಲು ತಿಳಿಸಿದರು.
ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಸ್ಥಳೀಯವಾಗಿ ಖರೀದಿಸಿದ ಔಷಧಗಳನ್ನು ಇ-ಔಷಧ ತಂತ್ರಾಂಶದಲ್ಲಿ ಇಂದೀಕರಿಸಲು ಕಟ್ಟು ನಿಟ್ಟಾಗಿ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ, ಬೆಳಗಾವಿ ಜಿಲ್ಲಾ ಆರೋಗ್ಯಾಧಿ ಡಾ: ಐ.ಪಿ ಗಡಾದ್, ಜಿಲ್ಲಾ ಔಷಧ ಉಗ್ರಾಣದ ಪ್ರಭಾರಧಾರಕ ಶಿವಾನಂದ ಸೊಂಟಕ್ಕಿ ಹಾಗೂ ಉಗ್ರಾಣದ ಸಿಬ್ಬಂದಿಗಳು ಉಪಸ್ಥಿತರಿದ್ದರು.