ಚಿತ್ರದುರ್ಗ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ನೋಂದಣಿ ಪ್ರಮಾಣ ಪತ್ರ ಪಡೆಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಈ ಹಿಂದೆ ಮ್ಯಾನುಯಲ್ ಆಗಿ ವಿತರಿಸಲಾಗುತ್ತಿದ್ದ ನೋಂದಣಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ ಆದೇಶಿಸಲಾಗಿದೆ.
ವಿದ್ಯುನ್ಮಾನ ನಾಗರಿಕ ಸೇವಾ ವಿತರಣ ನಿರ್ದೇಶನಾಲಯ ಈ ಆಡಳಿತ ಇಲಾಖೆಯ ಸೇವಾ ಸಿಂಧು ಯೋಜನೆಯಡಿ ನೋಂದಣಿ ಮಾಡಿಸಲು ಆನ್‍ಲೈನ್ ತಂತ್ರಾಂಶ ಅಭಿವೃದ್ದಿ ಪಡಿಸಿದ್ದು, ಈ ತಂತ್ರಾಂಶ ಬಳಸಿ ಸ್ವಯಂ ಸೇವಾ ಸಂಸ್ಥೆಗಳಿಗೆ ನೋಂದಣಿ, ನವೀಕರಣ ಪ್ರಮಾಣ ಪತ್ರ ವಿತರಿಸಲಾಗುವುದು. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಹಿರಿಯ ನಾಗರಿಕರ ವೃದ್ದಾಶ್ರಮಗಳನ್ನು ನಡೆಸುತ್ತಿರುವ ಎಲ್ಲಾ ಅನುದಾನಿತ/ಅನುದಾನರಹಿತ ಸ್ವಯಂ ಸೇವಾ ಸಂಸ್ಥೆಗಳು ಆನ್‍ಲೈನ್ ಮೂಲಕ https://sevasindhu.karnataka.gov.in ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ನೋಂದಣೆ ಪ್ರಮಾಣ ಪತ್ರ ಪಡೆಯಬೇಕೆಂದು ಈ ಮೂಲಕ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ. ಜಿಲ್ಲಾ ಬಾಲಭವನ ಆವರಣ, ಸ್ಟೇಡಿಯಂ ಹತ್ತಿರ, ಚಿತ್ರದುರ್ಗ ದೂರವಾಣಿ ಸಂಖ್ಯೆ:08194-235284 ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.