ಪ್ರಸಕ್ತ ವರ್ಷದಲ್ಲಿ ಮ್ಯಾಗ್ನೆಟಿಕ್ ಶಾಲೆಗಳೆಂದು ರಾಜ್ಯದ ಕೆಲವು ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ದಾಖಲಾತಿ ಹೆಚ್ಚಾಗುತ್ತಿರುವ ಶಾಲೆಗಳಿಗೆ ಮೂಲಸೌಕರ್ಯಗಳನ್ನು ನೀಡಲು ಒತ್ತು ನೀಡುತ್ತಿದ್ದೇವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು.
ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಬದಲಿಗೆ ಕ್ಲಸ್ಟರಿಂಗ್ ಮಾಡುತ್ತೇವೆ. ಸರ್ಕಾರಿ ಶಾಲೆಗಳಲ್ಲಿ 2024- 25 ನೇ ಸಾಲಿನಲ್ಲಿ 40.74ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2023- 24ನೇ ಸಾಲಿಗೆ ಹೋಲಿಸಿದರೆ ಎರಡು ಲಕ್ಷದಷ್ಟು ಪ್ರವೇಶ ಕ್ಷೀಣಿಸಿದೆ. ಸರ್ಕಾರ ಮಕ್ಕಳ ಪ್ರವೇಶ ಹೆಚ್ಚಳಕ್ಕಾಗಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಆರಂಭಿಸಿದೆ. ಒಂದು ಮಗು ಇದ್ದರೂ ಶಾಲೆ ನಡೆಸುತ್ತೇವೆ. ನಾಲ್ಕೈದು ಮಕ್ಕಳಿಗೆ ಒಂದು ಶಾಲೆ, ಶಿಕ್ಷಕರನ್ನು ನೀಡುವುದು ಬೇಡವೆನ್ನುವ ಅಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಲಸ್ಟರಿಂಗ್ ಮಾಡುತ್ತೇವೆ. ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಒಂದೇ ಕ್ಯಾಂಪಸ್ ನಲ್ಲಿ 16 ವರ್ಷ ವ್ಯಾಸಂಗ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.