ದುಬೈನಲ್ಲಿ ಮನೆ ಖರೀದಿಸುವ ವಿಚಾರದಲ್ಲಿ ಭಾರತೀಯರೇ ನಂಬರ್ 1; ಎರಡನೇ ಸ್ಥಾನದಲ್ಲಿದ್ದಾರೆ ಪಾಕಿಸ್ತಾನಿಯರು…!

ವಿದೇಶಗಳಲ್ಲಿ ಆಸ್ತಿ ಹೊಂದುವುದು ಅತಿ ಶ್ರೀಮಂತರಿಗೆ ಪ್ರತಿಷ್ಠೆಯ ವಿಷಯ. ಇದರಲ್ಲಿ ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮುಂಚೂಣಿಯಲ್ಲಿದ್ದು, ಕೊಲ್ಲಿ ರಾಷ್ಟ್ರದಲ್ಲಿ ಮನೆ ಖರೀದಿಸುವ ವಿಚಾರದಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ.

ಹೌದು, ಅಂತರಾಷ್ಟ್ರೀಯ ಅಪರಾಧ ಮತ್ತು ಸಂಘರ್ಷಗಳ ಕುರಿತು ಅಧ್ಯಯನ ನಡೆಸುವ ಅಮೆರಿಕ ಮೂಲದ ‘ದಿ ಸೆಂಟರ್ ಫಾರ್ ಅಡ್ವಾನ್ಸ್ಡ್ ಡಿಫೆನ್ಸ್ ಸ್ಟಡೀಸ್’ ಸಿದ್ಧಪಡಿಸಿರುವ ‘ದುಬೈ ಅನ್ಲಾಕ್’ ಎಂಬ ವರದಿಯಲ್ಲಿ ಈ ಕುತೂಹಲಕರ ಮಾಹಿತಿ ಬಹಿರಂಗವಾಗಿದೆ.

ಈ ವರದಿಯ ಪ್ರಕಾರ ಭಾರತದ 29,700 ಪ್ರಜೆಗಳು 35,000 ಆಸ್ತಿಯನ್ನು ಖರೀದಿ ಮಾಡಿದ್ದು, ಇದರ ಮೌಲ್ಯ ಬರೋಬ್ಬರಿ 1.40 ಲಕ್ಷ ಕೋಟಿ ರೂಪಾಯಿ. ಮತ್ತೊಂದು ಅಚ್ಚರಿಯ ಸಂಗತಿ ಈ ವರದಿಯಲ್ಲಿ ಬಹಿರಂಗವಾಗಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಅಲ್ಲಿನ ಅತಿ ಶ್ರೀಮಂತರು ಭಾರತದ ಬಳಿಕ ದುಬೈನಲ್ಲಿ ಆಸ್ತಿ ಖರೀದಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

17 ಸಾವಿರ ಪಾಕಿಸ್ತಾನಿಯರು 23,000 ಆಸ್ತಿ ಖರೀದಿ ಮಾಡಿದ್ದು ಇದರ ಮೌಲ್ಯ 1 ಲಕ್ಷ ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ. ಅಲ್ಲಿನ ರಾಜಕಾರಣಿಗಳು, ಅಪರಾಧ ಹಿನ್ನೆಲೆಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಹಾಗೂ ಅತಿ ಸಿರಿವಂತರು ಈ ಆಸ್ತಿ ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತದ ಅತಿ ಸಿರಿವಂತ ಎಂಬ ಹೆಗ್ಗಳಿಕೆ ಹೊಂದಿರುವ ಮುಕೇಶ್ ಅಂಬಾನಿ ಸೇರಿದಂತೆ ಉದ್ಯಮಿಗಳಾದ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ, ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಶಿಲ್ಪಾ ಶೆಟ್ಟಿ, ಅನಿಲ್ ಕಪೂರ್ ಮೊದಲಾದವರು ದುಬೈನಲ್ಲಿ ವಿಲ್ಲಾಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read