ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ನು ವರ್ಷಕ್ಕೆ ಎರಡು ಬಾರಿ ಕಾಲೇಜು ಸೇರಲು ಅವಕಾಶ

ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವರ್ಷಕ್ಕೆ ಎರಡು ಬಾರಿ ಪ್ರವೇಶ ಪ್ರಕ್ರಿಯೆ ಕೈಗೊಳ್ಳಲು ಅನುಮತಿ ನೀಡಲಾಗುವುದು ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ತಿಳಿಸಿದ್ದಾರೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಇಂತಹ ಸೌಲಭ್ಯವಿದ್ದು, ಇನ್ನು ಮುಂದೆ ಭಾರತದಲ್ಲಿನ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶೈಕ್ಷಣಿಕ ಸಂಸ್ಥೆಗಳು ವರ್ಷಕ್ಕೆ ಎರಡು ಬಾರಿ ಪ್ರವೇಶ ಕಲ್ಪಿಸಬಹುದು. ಕಾರಣಾಂತರದಿಂದ ಶೈಕ್ಷಣಿಕ ವರ್ಷವೊಂದರಲ್ಲಿ ಪ್ರವೇಶ ಪಡೆದುಕೊಳ್ಳಲು ವಿಫಲರಾದ ವಿದ್ಯಾರ್ಥಿಗಳು ಮತ್ತೊಂದು ಶೈಕ್ಷಣಿಕ ವರ್ಷದವರೆಗೆ ಕಾಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

2024 -25 ನೇ ಶೈಕ್ಷಣಿಕ ವರ್ಷದಿಂದ ಜುಲೈ -ಆಗಸ್ಟ್ ಮತ್ತು ಜನವರಿ -ಫೆಬ್ರವರಿ ಎರಡು ಸುತ್ತಿನಲ್ಲಿ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಸಿಗಲಿದೆ. ಈ ರೀತಿ ಎರಡು ಬಾರಿ ಪ್ರವೇಶ ಪ್ರಕ್ರಿಯೆಗೆ ಬೋಧಕ ಸಿಬ್ಬಂದಿ ಸೇರಿದಂತೆ ಸೂಕ್ತ ಮೂಲಸೌಕರ್ಯ ಇರುವ ಶಿಕ್ಷಣ ಸಂಸ್ಥೆಗಳು ಮಾತ್ರ ಈ ಪ್ರಯೋಗಕ್ಕೆ ಮುಂದಾಗಬೇಕೆಂದು ಯುಜಿಸಿ ಸೂಚಿಸಿದೆ.

ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಇದು ಕಡ್ಡಾಯವಲ್ಲ, ಇದನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಜಗದೀಶ್ ಕುಮಾರ್ ತಿಳಿಸಿದ್ದಾರೆ. ವಿವಿಧ ಮಂಡಳಿಗಳಿಂದ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ, ಆರೋಗ್ಯ ಸಮಸ್ಯೆ, ಮತ್ತಿತರ ಕಾರಣದಿಂದಾಗಿ ಜುಲೈ -ಆಗಸ್ಟ್ ನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಜನವರಿ -ಫೆಬ್ರವರಿಯಲ್ಲಿ ನಡೆಯುವ ಎರಡನೇ ಸುತ್ತಿನ ಪ್ರವೇಶ ಪ್ರಕ್ರಿಯೆಯಲ್ಲಿ ಪ್ರವೇಶ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಎರಡು ಬಾರಿ ಕ್ಯಾಂಪಸ್ ನೇಮಕಾತಿ ನಡೆಯಲಿದ್ದು, ಉದ್ಯೋಗಾವಕಾಶಗಳು ಕೂಡ ಹೆಚ್ಚಾಗುತ್ತದೆ. ಆರಂಭದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್ ಪ್ರವೇಶಕ್ಕೆ ಒಂದು ವರ್ಷ ಕಾಯುವುದು ತಪ್ಪುತ್ತದೆ ಎಂದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read