ನವದೆಹಲಿ: ಭಾರತ-ಪಾಕಿಸ್ತಾನ ನಡುವೆ ಆರಂಭವಾಗಿದ್ದ ಉದ್ವಿಗ್ನ ಸ್ಥಿತಿಗೆ ಬ್ರೇಕ್ ಹಾಕಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಪಾಕಿಸ್ತಾನ ಒಪ್ಪಿದೆ. ಈ ಮೂಲಕ ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಉಗ್ರರು ಗುಂಡಿನ ದಾಳಿ ನಡೆಸಿ 26 ಪ್ರವಾಸಿಗರನ್ನು ಬಲಿಪಡೆದ ಬೆನ್ನಲ್ಲೇ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಮೂಲಕ ಮೇ 7ರಿಂದ ಪಾಕಿಸ್ತಾನದ ನೆಲಕ್ಕೆ ನುಗ್ಗಿ ಉಗ್ರರ ನೆಲೆಗಳನ್ನು ಧಂಸಗೊಳಿಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿತ್ತು. ಈ ಮೂಲಕ ಭಯೋತ್ಪಾದನೆ ವಿರುದ್ಧ ಭಾರತ ಹೋರಾಟ ನಡೆಸಿತ್ತು. ಉಭಯ-ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಭಾರತೀಯ ಸೇನೆಯ ಪ್ರತ್ಯುತ್ತರಕ್ಕೆ ಪಾಕಿಸ್ತಾನ ಮಂಡಿಯೂರಿದ್ದು, ಕದನದಿಂದ ಹಿಂದೆ ಸರಿದಿದೆ.
ಭಾರತ-ಪಾಕಿಸ್ತಾನ ಉಭಯದೇಶಗಳ ಮಿಲಿಟರಿ ಅಧಿಕಾರಿಗಳ ಮಾತುಕತೆ ಬಳಿಕ ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಒಪ್ಪಂದವಾಗಿದೆ. ಉಭಯದೇಶಗಳ ನಡುವೆ ಸೇನಾ ಕಾರ್ಯಾಚರಣೆ ತಕ್ಷಣದಿಂದ ಜಾರಿಯಾಗುವಂತೆ ಸ್ಥಗಿತಗೊಂಡಿದೆ. ಆದರೆ ಉಗ್ರರ ವಿರುದ್ಧ ಭಾರತದ ಸಮರ ನಿರಂತರವಾಗಿರುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮೇ 12ರಂದು ಭಾರತ-ಪಾಕಿಸ್ತಾನ ಸೇನಾ ಡಿಜಿಎಂಒಗಳ ನಡುವೆ ಮಾತುಕತೆಗೆ ಸಮಯ ನಿಗದಿಯಾಗಿದೆ ಎಂದು ತಿಳಿದುಬಂದಿದೆ.