ಭಾರತೀಯ ರೈಲ್ವೇಯು ಪ್ರಯಾಣಿಕರಿಗೆ ಉತ್ತಮ ಸೌಕರ್ಯವನ್ನು ಒದಗಿಸಲು ನಿರಂತರವಾಗಿ ತನ್ನ ರೈಲುಗಳು ಮತ್ತು ಬೋಗಿಗಳನ್ನು ನವೀಕರಿಸುತ್ತಿದೆ. ವಂದೇ ಭಾರತ್, ಶತಾಬ್ದಿ ಎಕ್ಸ್ಪ್ರೆಸ್ ಮತ್ತು ರಾಜಧಾನಿ ಸೂಪರ್ಫಾಸ್ಟ್ ರೈಲುಗಳಂತಹ ಅತ್ಯುತ್ತಮ ರೈಲುಗಳು ತಮ್ಮ ವೇಗ ಮತ್ತು ಸ್ವಚ್ಛತೆಗೆ ಹೆಸರುವಾಸಿಯಾಗಿವೆ. ಆದರೆ, ಕೆಲವು ರೈಲುಗಳು ತಮ್ಮ ಕೊಳಕಿಗಾಗಿ ಕುಖ್ಯಾತಿ ಪಡೆದಿವೆ. ಈ ರೈಲುಗಳಲ್ಲಿ ಪ್ರಯಾಣಿಸುವುದು ಎಂದರೆ ನೀವು ಕಸದ ರಾಶಿಯ ಮೇಲೆ ಕುಳಿತಂತೆ ಭಾಸವಾಗುತ್ತದೆ.
ಈ ರೈಲುಗಳನ್ನು ಕೊಳಕು ಮಾಡುವಲ್ಲಿ ಪ್ರಯಾಣಿಕರೂ ಕಾರಣರಾಗಿದ್ದಾರೆ ಎಂಬುದು ನಿಜ. ಆದರೂ, ಕೆಲವು ರೈಲುಗಳ ನಿರ್ವಹಣೆಯಲ್ಲಿನ ಕೊರತೆಯೂ ಸ್ಪಷ್ಟವಾಗಿ ಗೋಚರಿಸುತ್ತದೆ. ಬಿಹಾರ್ ಮತ್ತು ಪಂಜಾಬ್ ನಂತಹ ಪ್ರಮುಖ ರಾಜ್ಯಗಳನ್ನು ಸಂಪರ್ಕಿಸುವ ಸೀಮಾಂಚಲ ಎಕ್ಸ್ಪ್ರೆಸ್ ಮತ್ತು ಸಹರ್ಸಾ-ಅಮೃತಸರ ಗರೀಬ್ ರಥ ರೈಲುಗಳು ಇಂತಹ ಕೊಳಕು ರೈಲುಗಳಿಗೆ ಕೆಲವು ಉದಾಹರಣೆಗಳಾಗಿವೆ.
ಈ ರೈಲುಗಳಲ್ಲಿ ಹಲವು ಸೌಲಭ್ಯಗಳ ಕೊರತೆಯಿದೆ. ಕೊಳಕು ಶೌಚಾಲಯಗಳು, ಕೊಳಕು ಕ್ಯಾಬಿನ್ ಮತ್ತು ದುರ್ವಾಸನೆ ಬೀರುವ ಸಿಂಕ್ಗಳ ಬಗ್ಗೆ ಪ್ರಯಾಣಿಕರು ನಿರಂತರವಾಗಿ ದೂರು ನೀಡುತ್ತಲೇ ಇರುತ್ತಾರೆ. 2023ರಲ್ಲಿ, ರೈಲ್ವೇಗೆ ಸ್ವಚ್ಛತೆಗೆ ಸಂಬಂಧಿಸಿದಂತೆ ಆನೇಕ ದೂರುಗಳು ಬಂದಿವೆ. ಈ ರೈಲುಗಳಲ್ಲಿ ಅಕ್ಷರಶಃ ಎಲ್ಲೆಂದರಲ್ಲಿ ಕಸ ಬಿದ್ದಿರುವುದನ್ನು ಕಾಣಬಹುದು. ಸೀಟುಗಳೂ ಸಹ ಸರಿಯಾಗಿ ನಿರ್ವಹಿಸಲ್ಪಟ್ಟಿಲ್ಲ ಎಂದು ಪ್ರಯಾಣಿಕರು ದೂರುತ್ತಾರೆ.