ಇಂಗ್ಲೆಂಡ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ: 2ನೇ ಟೆಸ್ಟ್ ನಲ್ಲಿ 336 ರನ್ ಗಳಿಂದ ಜಯ

ಬರ್ಮಿಂಗ್ ಹ್ಯಾಮ್: ಸಂಪೂರ್ಣ ತಂಡವಾಗಿ ಪ್ರದರ್ಶನ ನೀಡಿದ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 336 ರನ್ ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದೆ.

ಇದರೊಂದಿಗೆ 58 ವರ್ಷಗಳ ನಂತರ ಸೋಲಿನ ಸರಪಳಿಯನ್ನು ಕಳಚಿ ಇತಿಹಾಸ ಬರೆದಿದೆ. 608 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವನ್ನು 271 ರನ್ ಗಳಿಗೆ ಕಟ್ಟಿ ಹಾಕಿದ ಭಾರತ ತಂಡ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಪಂದ್ಯದ ಉಭಯ ಇನಿಂಗ್ಸ್ ಗಳಲ್ಲಿ ನಾಯಕ ಶುಭಮನ್ ಗಿಲ್ 430 ರನ್, ಮಧ್ಯಮ ವೇಗಿ ಆಕಾಶ್ ದೀಪ್ 10ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ನಲ್ಲಿ 58 ವರ್ಷಗಳ ನಂತರ ಮೊದಲ ಜಯ ದಾಖಲಿಸಿದ ಭಾರತ ಇತಿಹಾಸ ಸೃಷ್ಟಿಸಿದೆ. ಈ ಪಂದ್ಯಕ್ಕೆ ಮೊದಲು 1967 ರಿಂದ ಆಡಿದ್ದ 8 ಪಂದ್ಯಗಳಲ್ಲಿ 7ರಲ್ಲಿ ಸೋತಿದ್ದ ಭಾರತ ತಂಡ ಒಂದು ಪಂದ್ಯ ಡ್ರಾ ಮಾಡಿಕೊಂಡಿತ್ತು.

ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 269 ರನ್ ಗಳಿಸಿದ ಶುಭಮನ್ ಗಿಲ್ ದ್ವಿತೀಯ ಇನಿಂಗ್ಸ್ ನಲ್ಲಿ 161 ರನ್ ಗಳಿಸಿ ಒಂದೇ ಟೆಸ್ಟ್ನಲ್ಲಿ 430 ರನ್ ಗಳಿಸಿದರು. ಈ ಮೂಲಕ ಒಂದೇ ಟೆಸ್ಟ್ ನಲ್ಲಿ 344 ರನ್ ಗಳಿಸಿದ್ದ ಸುನಿಲ್ ಗವಾಸ್ಕರ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಕಬಳಿಸಿದ್ದ ಆಕಾಶ್ ದೀಪ್ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ಗೊಂಚಲು ಪಡೆದಿದ್ದು, ಪಂದ್ಯದಲ್ಲಿ ಒಟ್ಟು 10 ವಿಕೆಟ್ ಪಡೆದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ: ಮೊದಲ ಇನಿಂಗ್ಸ್ 587 ಮತ್ತು 2ನೇ ಇನಿಂಗ್ಸ್ ನಲ್ಲಿ 427ಕ್ಕೆ 6 ಡಿಕ್ಲೇರ್ಡ್

ಇಂಗ್ಲೆಂಡ್: ಮೊದಲ ಇನಿಂಗ್ಸ್ 407 ಮತ್ತು 2ನೇ ಇನಿಂಗ್ಸ್ ನಲ್ಲಿ 271

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read