ಬೆಂಗಳೂರು: ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾಯಿತು ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ವೆಚ್ಚ ಮಾಡಿದ ಪರಿಣಾಮ 2023- 24ನೇ ಸಾಲಿನಲ್ಲಿ 9271 ಕೋಟಿ ರೂ. ರಾಜಸ್ವ ಕೊರತೆ ಉಂಟಾಗಿದೆ. ವಿತ್ತೀಯ ಕೊರತೆ 65,522 ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಸಿಎಜಿ ವರದಿ ತಿಳಿಸಿದೆ. ಈ ಕೊರತೆಗಳನ್ನು ಸರಿದೂಗಿಸಲು ಸರ್ಕಾರ 63,000 ಕೋಟಿ ರೂ. ಸಾಲ ಸಂಗ್ರಹಿಸಿದೆ. ಸಂಪನ್ಮೂಲದ ಮೇಲೆ ಗ್ಯಾರಂಟಿ ಯೋಜನೆಗಳಿಂದ ಒತ್ತಡವಾಗುತ್ತಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2023- 24ನೇ ಸಾಲಿಗೆ ಕೊನೆಗೊಂಡ ರಾಜ್ಯದ ಹಣಕಾಸು ವ್ಯವಹಾರಗಳ ಲೆಕ್ಕ ಪರಿಶೋಧನಾ ವರದಿಯಲ್ಲಿ 2023- 24ರಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಪಂಚ ಗ್ಯಾರಂಟಿ ಯೋಜನೆಗಳಿಂದ ಎದುರಾಗುತ್ತಿರುವ ಆರ್ಥಿಕ ಪರಿಣಾಮಗಳ ಬಗ್ಗೆ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ವಿತ್ತೀಯ ಕೊರತೆ ರಾಜ್ಯಸ್ವ ಕೊರತೆ ಸರಿದೂಗಿಸಲು ರಾಜ್ಯ ಸರ್ಕಾರ 63,000 ಕೋಟಿ ರೂ. ನಿವ್ವಳ ಮಾರುಕಟ್ಟೆ ಸಾಲ ಪಡೆದುಕೊಂಡಿದೆ. 2022 -23ಕ್ಕೆ ಹೋಲಿಸಿದರೆ 37 ಸಾವಿರ ಕೋಟಿ ರೂ. ಹೆಚ್ಚಿನ ನಿವ್ವಳ ಮಾರುಕಟ್ಟೆ ಸಾಲ ಪಡೆಯಲಾಗಿದೆ. ಗ್ಯಾರಂಟಿ ಯೋಜನೆಗಳ ಕಾರಣದಿಂದ ಬಂಡವಾಳ ವೆಚ್ಚವನ್ನು 5229 ಕೋಟಿ ರೂ. ಕಡಿಮೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.