ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಾಗಿದೆ.
ಖಾಸಗಿಯವರಿಂದ ಒತ್ತುವರಿಯಾಗಿರುವ ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಅಂದಾಜು 10,710 ಕೆರೆಗಳ ಅಳತೆ ಬಾಕಿ ಇದ್ದು, ಎರಡು ತಿಂಗಳ ಒಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು.
ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೃಹತ್ ನೀರಾವರಿ ಇಲಾಖೆ, ಅರಣ್ಯ, ಕಂದಾಯ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಾಜ್ಯದಲ್ಲಿರುವ 41,875 ಕೆರೆಗಳ ಪೈಕಿ 31,033 ಕೆರೆಗಳು ಅಳತೆ ಯಾಗಿವೆ.
11,212 ಒತ್ತುವರಿ ಗುರುತಿಸಲಾಗಿದೆ. 5,967 ಕೆರೆಗಳ ಒತ್ತುವರಿ ತೆರವು ಗೊಳಿಸಲಾಗಿದೆ. ಸುಮಾರು 5,245 ಕೆರೆಗಳು ತೆರವು ಗೊಳಿಸಲು ಬಾಕಿ ಇದ್ದು, ಆದಷ್ಟು ಬೇಗ ಇವುಗಳ ತೆರವು ಪೂರ್ಣಗೊಳಿಸಬೇಕು.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 3,778 ಕೆರೆಗಳಿದ್ದು, 166 ಕೆರೆಗಳ ಒತ್ತುವರಿ ತೆರವು ಕಾರ್ಯ ಬಾಕಿ ಇದೆ.
ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ 202 ಕೆರೆ ಗಳಿದ್ದು 167 ಕೆರೆಗಳು ಅಳತೆಯಾಗಿವೆ.
ಸುಮಾರು 96 ಕೆರೆಗಳ ಒತ್ತುವರಿ ತೆರವು ಬಾಕಿ ಇದೆ.
ಮಾಲಿನ್ಯ ನಿಯಂತ್ರಣ ಮಂಡಳಿಯು ಆದ್ಯತೆ ಮೇರೆಗೆ ಕೆರೆಗಳು ಮಲಿನವಾಗದಂತೆ ತಡೆಯಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಸಂಬಂಧ ಕಾರ್ಯಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಬೇಕು.
ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳಿಂದ ಆದಾಯ ಗಳಿಸಲು ಸಾಧ್ಯವಾಗುವಂತೆ ಆನ್ಲೈನ್ ಟೆಂಡರ್ ಕರೆಯಲು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು.
ಕೆರೆಗಳ ಸುತ್ತ ಬಫರ್ ಜೋನ್ ಅನ್ನು ನಿಗದಿ ಪಡಿಸಲು ತಾಂತ್ರಿಕ ಸಮಿತಿ ರಚಿಸಿ, ಕೆರೆ ಸಂರಕ್ಷಣೆಯ ನಿಟ್ಟಿನಲ್ಲಿ ಹೆಚ್ಚು ಶ್ರಮಿಸಬೇಕು ಎಂದು ತಿಳಿಸಿದ್ದಾರೆ.