ಬೆಳಗಾವಿ: ಬೆಳೆ ವಿಮೆ ಮತ್ತು ಪರಿಹಾರ ಸಿಗಬೇಕಾದಲ್ಲಿ ರೈತರು ಕೂಡಲೇ ಆಧಾರ್ ನಲ್ಲಿರುವ ದೋಷ ಸರಿಪಡಿಸಿಕೊಂಡು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಲಹೆ ನೀಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ತಿಪ್ಪಣ್ಣಪ್ಪ ಕಮಕೂರ ಅವರು ಅತಿವೃಷ್ಟಿ ಪರಿಹಾರ ಮತ್ತು ಬೆಳೆ ಹಾನಿ ಕೆಲವು ರೈತರಿಗೆ ತಲುಪದ ಬಗ್ಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಇದುವರೆಗೆ ರಾಜ್ಯದಲ್ಲಿ ಶೇಕಡ 97 ರಷ್ಟು ರೈತರಿಗೆ ಬೆಳೆ ವಿಮೆ ಮತ್ತು ಪರಿಹಾರ ನೀಡಲಾಗಿದೆ. ಶೇಕಡ 3ರಷ್ಟು 44,248 ರೈತರ ಆಧಾರ್ ಮತ್ತು ಪಹಣಿಯಲ್ಲಿ ಇರುವ ಹೆಸರು ಹೊಂದಾಣಿಕೆಯಾಗುತ್ತಿಲ್ಲ. ಬ್ಯಾಂಕ್ ಖಾತೆಗೆ ಲಿಂಕ್ ಆಗದ ಕಾರಣ ಮತ್ತು ಕೇಂದ್ರದ NPCT ಗೆ ಸೀಡಿಂಗ್ ಆಗದ ಕಾರಣ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಈ ದೋಷ ಸರಿಪಡಿಸಿದ ಕೂಡಲೇ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ. ಈಗಾಗಲೇ ಕಂದಾಯ ಇಲಾಖೆ ವತಿಯಿಂದ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
