ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಫಲಿತಾಂಶ ಮೇ ತಿಂಗಳ ಮೂರನೇ ವಾರ ಪ್ರಕಟವಾಗುವ ಸಾಧ್ಯತೆ ಇದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವತಿಯಿಂದ ಏಪ್ರಿಲ್ 16, 17ರಂದು ನಡೆಸಿದ ಸಿಇಟಿಯಲ್ಲಿ 3.30 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಪರೀಕ್ಷೆ ಬರೆದಿದ್ದರು. ಪ್ರಾಧಿಕಾರ ಕೀ ಉತ್ತರಗಳನ್ನು ಪ್ರಕಟಿಸಿದೆ. ಭೌತಶಾಸ್ತ್ರಕ್ಕೆ ಒಂದು ಕೃಪಾಂಕ ನೀಡಲಾಗಿದೆ.
ಸಿಇಟಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಸಿಇಟಿ ಫಲಿತಾಂಶಕ್ಕೆ ಮೊದಲು ರಾಜ್ಯ ಪಠ್ಯಕ್ರಮಗಳ ದ್ವಿತೀಯ ಪಿಯುಸಿ ಪರೀಕ್ಷೆ-2, ಸಿಬಿಎಸ್ಇ ಮತ್ತು ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಬೇಕಿದೆ. ಬಿಎಸ್ಸಿ ಕೃಷಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಬರೆದ ಪರೀಕ್ಷೆ ಫಲಿತಾಂಶವನ್ನು ಕೃಷಿ ವಿವಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಬೇಕಿದೆ. ಇದೆಲ್ಲ ಆದ ನಂತರ ಸಿಇಟಿ ಮತ್ತು ಉಳಿದ ಪರೀಕ್ಷೆಗಳ ತಲಾ ಶೇಕಡ 50 ಅಂಕಗಳನ್ನು ಪರಿಗಣಿಸಿ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಲಿದೆ. ಮೇ 18ರಿಂದ 20ರೊಳಗೆ ಸಿಇಟಿ ಫಲಿತಾಂಶ ಪ್ರಕಟವಾಗಬಹುದು ಎಂದು ಹೇಳಲಾಗಿದೆ.