ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಾಲಯ, ಸೌತಡ್ಕ ಮಹಾ ಗಣಪತಿ ದೇವಾಲಯ, ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಾಲಯ ಸೇರಿದಂತೆ ಮುಜರಾಯಿ ಇಲಾಖೆ ವ್ಯಾಪ್ತಿಯ 14 ದೇವಾಲಯಗಳ ಸೇವಾ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಅಕ್ಟೋಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಇದು ದೇವಾಲಯಗಳ ಆಡಳಿತ ಮಂಡಳಿಯ ತೀರ್ಮಾನವೇ ಹೊರತು ಸರ್ಕಾರದ ನಿರ್ಧಾರವಲ್ಲ. ಆಡಳಿತ ಮಂಡಳಿ ತೀರ್ಮಾನದ ಅನುಸಾರ ಮುಜರಾಯಿ ಇಲಾಖೆ ಆದೇಶಿಸಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
2010ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೇವಾ ಶುಲ್ಕ ಏರಿಕೆ ಮಾಡಲಾಗಿತ್ತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಪೂಜೆ, ನಾಗ ಪ್ರತಿಷ್ಠೆಗೆ ಇದ್ದ ತಲಾ 400 ರೂಪಾಯಿ ಸೇವಾದರ 500 ರೂ.ಗೆ ಏರಿಕೆಯಾಗಿದೆ. ಉಳಿದ ಸೇವೆಗಳ ದರದಲ್ಲಿಯೂ ಹೆಚ್ಚಳ ಮಾಡಲಾಗಿದೆ.
ನಗರದ ಬೆಂಗಳೂರು ನಗರದ ಮಲ್ಲೇಶ್ವರಂನ ಯೋಗ ನರಸಿಂಹ ಸ್ವಾಮಿ ದೇವಾಲಯ, ನಂದಿ ತೀರ್ಥ, ಮಹಾಗಣಪತಿ, ಚಿಕ್ಕಬಳ್ಳಾಪುರ ವಿದುರಾಶ್ವಥದ ನಾರಾಯಣಸ್ವಾಮಿ, ತಲಕಾಯ ಬೆಟ್ಟದ ವೆಂಕಟರಮಣ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಮಹಾಲಿಂಗೇಶ್ವರ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಮಹಾ ಗಣಪತಿ, ಮಾರಾಳಿಯ ಸೂರ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ ಸೇವಾ ಶುಲ್ಕ ಏರಿಕೆ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ದೇವರಹೊಸಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ದೇವಪೂರದ ಹಾಲು ರಾಮೇಶ್ವರ, ರಾಯಚೂರು ಜಿಲ್ಲೆ ದೇವಸುಗೂರಿನ ಸೂಗೂರೇಶ್ವರ ಸ್ವಾಮಿ, ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಮಂದಾರ್ತಿಯ ದುರ್ಗಾಪರಮೇಶ್ವರಿ, ಕೊಪ್ಪಳ ಜಿಲ್ಲೆ ಹುಲಿಗಿಯ ಹುಲಿಗೆಮ್ಮ ಮತ್ತು ಮಂಡ್ಯ ಜಿಲ್ಲೆ ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇವಾಲಯಗಳಲ್ಲಿ ಸೇವಾ ಶುಲ್ಕ ಹೆಚ್ಚಳ ಮಾಡಲಾಗಿದೆ.