ಬೆಂಗಳೂರು: ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಅಕ್ರಮ ಮರಳು ದಂಧೆ ತಡೆಯಲು ಜಿಪಿಎಸ್ ಅಳವಡಿಕೆ, ಸ್ಕ್ವಾಡ್ ತಂಡವನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯರಾದ ಹೇಮಲತಾ ನಾಯಕ ಅವರ ಪ್ರಶ್ನೆಗೆ ಗಣಿ ಸಚಿವರ ಪರವಾಗಿ ಉತ್ತರ ನೀಡಿದ ಸಚಿವ ಚಲುವರಾಯಸ್ವಾಮಿ, ಅಕ್ರಮ ಮರಳು ದಂಧೆ ತಡೆಯುವ ನಿಟ್ಟಿನಲ್ಲಿ ಮರಳುಗಾರಿಕೆ ನಡೆಯುವ ಸ್ಥಳಗಳಲ್ಲಿ ಜಿಪಿಎಸ್ ಅಳವಡಿಸಲಾಗುವುದು. ಈಗಿರುವ ಸ್ಕ್ವಾಡ್ ತಂಡವನ್ನು ಮತ್ತಷ್ಟು ಬಲಪಡಿಸಲಾಗುವುದು. ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಸೇರಿದಂತೆ ಇತರರಿಗೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗದಂತೆ ಬಿಗಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ರಾಜಸ್ವ ಸಂಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ನಿರ್ದಿಷ್ಟ ಪ್ರಕರಣಗಳಿದ್ದಲ್ಲಿ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.