BIG NEWS: ರಾಜ್ಯದಲ್ಲಿ ಹೋಂ ಸ್ಟೇ ನಿರ್ವಹಣೆ ಬಗ್ಗೆ ಹೊಸ ನೀತಿ ಜಾರಿ

ಮಡಿಕೇರಿ: ರಾಜ್ಯದಲ್ಲಿ ಹೋಂ ಸ್ಟೇ ನಿರ್ವಹಣೆ ಸಂಬಂಧ ನೂತನ ನೀತಿಯನ್ನು ಮುಂದಿನ ಜನವರಿ-ಫೆಬ್ರವರಿಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಕಾರ್ಯಚಟುವಟಿಕೆಗಳು, ಪ್ರವಾಸೋದ್ಯಮ ನೀತಿ, ಮೂಲಭೂತ ಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಪ್ರಚಾರಾಂದೋಲನ, ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಪ್ರವಾಸಿ ಕ್ಷೇತ್ರದಲ್ಲಿ ತೊಡಗಿರುವ ಪಾಲುಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಪ್ರಸ್ತುತ ರಾಜ್ಯದಲ್ಲಿನ ಪ್ರಮುಖ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸಿ ರಾಜ್ಯದ ಎಲ್ಲಾ ಪ್ರವಾಸಿ ಸಹಭಾಗಿದಾರರನ್ನು ಒಗ್ಗೂಡಿಸುವ ಸಂಬಂಧ ನಗರ ಹೊರವಲಯದ ಖಾಸಗಿ ರೆಸಾರ್ಟ್‍ನಲ್ಲಿ ಗುರುವಾರ ನಡೆದ ‘ಕನೆಕ್ಟ್ ಕರ್ನಾಟಕ-2024’ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ಒಂದು ನೀತಿ ಬೇಕಿದೆ ಎಂದು ಹಲವು ದಶಕಗಳಿಂದ ಕೇಳಿ ಬರುತ್ತಿದ್ದು, ಈ ಹಿನ್ನೆಲೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಮುಂದಿನ ಕ್ಯಾಲೆಂಡರ್ ವರ್ಷದ ಆರಂಭದಲ್ಲಿಯೇ ಹೋಂಸ್ಟೇಗಳಿಗೆ ಹೊಸ ನೀತಿಯನ್ನು ಸರ್ಕಾರ ಘೋಷಿಸಲಿದೆ ಎಂದು ಹೇಳಿದರು.

ಮಾಲಿಕರು ವಾಸಿಸುವ ಸ್ಥಳದಲ್ಲಿಯೇ ಹೋಂಸ್ಟೇಗಳು ಇರುವುದರಿಂದ ಅವುಗಳ ನಿರ್ವಹಣೆ, ನೋಂದಣಿ ಪ್ರಕ್ರಿಯೆ, ಎನ್‍ಒಸಿ ಪಡೆಯುವುದು ಮತ್ತಿತರ ಮಾರ್ಗಸೂಚಿಯನ್ನು ಹೊಸ ಹೋಸ್ಟೇ ನೀತಿಯಲ್ಲಿ ಪ್ರಕಟಿಸಲಾಗುವುದು. ಹೋಂಸ್ಟೇಗಳನ್ನು ನೋಂದಣಿ ಮಾಡಿಕೊಂಡು ಪ್ರವಾಸಿಗರಿಗೆ ಉತ್ತಮ ಮೂಲ ಸೌಲಭ್ಯ ಕಲ್ಪಿಸಬೇಕು. ಅಂತಹ ಹೋಂಸ್ಟೇಗಳಿಗೆ ಆದಷ್ಟು ಸಹಕಾರ, ಪ್ರೋತ್ಸಾಹ ನೀಡಲಾಗುವುದು. ಆ ನಿಟ್ಟಿನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ‘ವೃತ್ತಿ ಕೌಶಲ್ಯ ತರಬೇತಿ’ ಕಾರ್ಯಕ್ರಮವನ್ನು ಹಮ್ಮಿಕೊಂಡು, ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಒತ್ತು ನೀಡಲು ಮುಂದಾಗಲಾಗಿದೆ. ಸ್ಥಳೀಯವಾಗಿ ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಪ್ರವಾಸೋದ್ಯಮ ಸಾಕಷ್ಟು ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಪ್ರತೀ ಜಿಲ್ಲೆಯಲ್ಲೂ ಆಯೋಜಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸರ್ಕಾರಕ್ಕೂ ಆದಾಯ ಬರಲಿದ್ದು, ತೆರಿಗೆ ಸಂಗ್ರಹವಾಗಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ. ಆ ನಿಟ್ಟಿನಲ್ಲಿ ಯುವಜನರಿಗೆ ಅವಕಾಶಗಳು ಒದಗಲಿವೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿ ಮಾಡುವಲ್ಲಿ ಹೋಂಸ್ಟೇ, ಹೋಟೆಲ್‍ಗಳು, ಟ್ರಾವೆಲ್ ಹೀಗೆ ಒಂದಕ್ಕೊಂದು ಸಂಬಂಧವಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಆಗಬೇಕಿರುವ ಕೆಲಸಗಳ ಬಗ್ಗೆ ಬೆಳಕು ಚೆಲ್ಲುವಂತಾಗಬೇಕು. ತಮ್ಮ ನಿರೀಕ್ಷೆಗಳು ಏನು, ಭವಿಷ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಹೇಗೆ ಅಭಿವೃದ್ಧಿ ಮಾಡಬಹುದು ಎಂದು ಪ್ರತಿಯೊಬ್ಬರೂ ಯೋಚಿಸಬೇಕು. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಲ್ಲಿ ‘ಕಾಫಿ ಟೇಬಲ್ ಬುಕ್’ನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಪ್ರವಾಸೋದ್ಯಮ ಸಂಘದ ಗೌರವ ಸಲಹೆಗಾರ ಅನಿಲ್ ಹೆಚ್.ಟಿ., ಮೋಂತಿ ಗಣೇಶ್  ಅವರು ಮಾತನಾಡಿದರು.

ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ಕೆ.ಶ್ಯಾಮರಾಜ್, ಕರ್ನಾಟಕ ಹೋಟೆಲ್ ಅಸೋಷಿಯೇಷನ್‍ನ ಅಧ್ಯಕ್ಷ ಜಿ.ಕೆ.ಶೆಟ್ಟಿ, ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆಯ ಸದಸ್ಯ ಅಯ್ಯಪ್ಪ ಸೋಮಯ್ಯ, ಬೆಂಗಳೂರು ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ಪಿ.ಸಿ.ರಾವ್, ಜಿಲ್ಲಾ ಹೋಟೆಲ್ ಅಸೋಷಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ಜಿಲ್ಲಾ ಹೋಟೆಲ್ ಅಸೋಷಿಯೇಷನ್ ಸಂಸ್ಥೆಯ ಸಲಹೆಗಾರ ಜಿ.ಚಿದ್ವಿಲಾಸ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಜಿಲ್ಲಾ ಹೋಟೆಲ್ ಅಸೋಷಿಯೇಷನ್ ಸಂಸ್ಥೆಯ ಕಾರ್ಯದರ್ಶಿ ನಾಜೀರ್, ಜಿಲ್ಲಾ ಟೂರ್ ಅಂಡ್ ಟ್ರಾವೆಲ್ ಸಂಸ್ಥೆಯ ಅಧ್ಯಕ್ಷ ವಸಂತ, ಛಾಯಾ ನಂಜಪ್ಪ, ಕರ್ನಾಟಕ ಪ್ಲಾಂಟರ್ ಅಸೋಷಿಯೇಷನ್‍ನ ಸದಸ್ಯ ಮೋಹನ್ ದಾಸ್, ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಸಮಾಲೋಚಕ ಜತಿನ್ ಬೋಪಣ್ಣ ಇತರರು ಇದ್ದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ಸ್ವಾಗತಿಸಿದರು, ಸ್ವಪ್ನಾ ಹಾಗೂ ಚೋಂದಮ್ಮ ನಾಡಗೀತೆ ಹಾಡಿದರು, ಹೋಟೆಲ್ ಅಸೋಷಿಯೇಷನ್‍ನ ಜಿಲ್ಲಾ ಅಧ್ಯಕ್ಷ ದಿನೇಶ್ ಕಾರ್ಯಪ್ಪ ವಂದಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read