ಗ್ರಾಮ ಆಡಳಿತಾಧಿಕಾರಿ ನೇಮಕಾತಿಯಲ್ಲಿ ಲೋಪ, ಅಕ್ರಮ ಆರೋಪ: ರಾತ್ರೋರಾತ್ರಿ ತಾತ್ಕಾಲಿಕ ಆಯ್ಕೆ ಪಟ್ಟಿ ವಾಪಸ್

ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಡಳಿತ ಪ್ರಕಟಿಸಿದ 1:3 ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಲೋಪ ಉಂಟಾಗಿದ್ದು, ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅ. 26, 27ರಂದು ಒಂದು ಸಾವಿರ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಿದ್ದು, ಡಿ. 20ರಂದು ಮೆರಿಟ್ ಪಟ್ಟಿ ಪ್ರಕಟಿಸಿ ಜಿಲ್ಲೆಗಳಿಗೆ ಪಟ್ಟಿ ಕಳುಹಿಸಲಾಗಿದೆ.

ತುಮಕೂರು ಜಿಲ್ಲಾಡಳಿತ ಡಿಸೆಂಬರ್ 21ರಂದು ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದು, ಜಾತಿವಾರು ಹುದ್ದೆಗಳ ವಿಂಗಡಿಸಿ ಪಟ್ಟಿ ಬಿಡುಗಡೆ ಮಾಡಿ ದಾಖಲಾತಿ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಪ್ರಾಧಿಕಾರ ಬಿಡುಗಡೆ ಮಾಡಿದ ಮೆರಿಟ್ ಪಟ್ಟಿಗೂ, ಜಿಲ್ಲಾಡಳಿತ ಪ್ರಕಟ ಮಾಡಿದ ಪಟ್ಟಿಗೂ ಬಹಳಷ್ಟು ವ್ಯತ್ಯಾಸವಿದೆ. ತಾತ್ಕಾಲಿಕ ಪಟ್ಟಿಯಲ್ಲಿ ಅಭ್ಯರ್ಥಿಗಳ 40 ರಿಂದ 70 ಅಂಕಗಳು ಹೆಚ್ಚು ಕಡಿಮೆಯಾಗಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಅಂಕಪಟ್ಟಿಯಲ್ಲಿ ಸಂಪೂರ್ಣ ವ್ಯತ್ಯಾಸವಿದೆ. ಮೀಸಲಾತಿವಾರು ಪಟ್ಟಿ ಸಿದ್ಧಪಡಿಸುವಲ್ಲಿ ಲೋಪವಾಗಿದೆ ಎನ್ನಲಾಗಿದ್ದು, ಗೊಂದಲಕ್ಕೆ ಕಾರಣವಾಗಿದ್ದ ಆಯ್ಕೆಪಟ್ಟಿಯನ್ನು ತುಮಕೂರು ಜಿಲ್ಲಾಡಳಿತ ರಾತ್ರೋರಾತ್ರಿ ತನ್ನ ಅಧಿಕೃತ ವೆಬ್ಸೈಟ್ ನಿಂದ ಹಿಂಪಡೆದುಕೊಂಡಿದೆ. ಆಯ್ಕೆ ಪಟ್ಟಿ ಗೊಂದಲದ ಬಗ್ಗೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಪಟ್ಟಿ ವಾಪಸ್ ಪಡೆದುಕೊಂಡಿದೆ. ತಾಂತ್ರಿಕ ಕಾರಣದಿಂದ 1:3 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read