BIG NEWS: ಅಕ್ರಮ ಗಣಿಗಾರಿಕೆ: ಆಸ್ತಿ ಜಪ್ತಿ ಕಾನೂನಿಗೆ ರಾಜ್ಯಪಾಲರ ಅಂಕಿತ: ಕಾನೂನು ಜಾರಿ: ಹೆಚ್.ಕೆ.ಪಾಟೀಲ್ ಮಾಹಿತಿ

ಬೆಂಗಳೂರು: ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ಅಧಿನಿಯಮ- 2025 ಕ್ಕೆರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಈ ಅಧಿನಿಯಮ ದಿನಾಂಕ:09.09.2025 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಸಂಖ್ಯೆಯ ಗುತ್ತಿಗೆದಾರರು, ಸಾಗಾಣಿಕೆದಾರರು, ರಫ್ತುದಾರರು, ದಾಸ್ತಾನುದಾರಕರು, ಖರೀದಿದಾರರು ಮತ್ತು ಇತರ ಮಧ್ಯವರ್ತಿಗಳು ಸೇರಿದಂತೆ ಬಹುವಹಿವಾಟುಗಳನ್ನು ಒಳಗೊಂಡ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಂದ ಸಂಘಟಿತ ಅಪರಾಧ, ವ್ಯವಸ್ಥಿತ ಒಳಸಂಚು ಮತ್ತು ಅಪರಾಧ ಉತ್ಪತ್ತಿಗಳಿಂದಾದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು, ಜಪ್ತಿಮಾಡಲು, ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ವಸೂಲಿ ಆಯುಕ್ತರೊಬ್ಬರ ನೇಮಕಾತಿಯ ಅವಶ್ಯಕತೆಯನ್ನು ಸರ್ಕಾರ ಮನಗಂಡು ಈ ಅಧಿನಿಯಮವನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ, ಒಪ್ಪಿಗೆ ಪಡೆದು ಅಧಿಸೂಚಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಆಸ್ತಿಯನ್ನು ಗುರುತಿಸಿ, ಅಂತಹ ಆಸ್ತಿಯನ್ನು ಜಪ್ತಿಮಾಡಲು ಸರ್ಕಾರಕ್ಕೆ ಅಧಿಕಾರ ದೊರಕಿದೆ.

ಅಕ್ರಮ ಗಣಿಗಾರಿಕೆ ಕುರಿತು ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಿ ನನ್ನ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ರಚನೆಯಾಗಿತ್ತು. ಈ ಸಮಿತಿಯು ಸಚಿವ ಸಂಪುಟಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಜೊತೆಗೆ ಕರಡು ಮಸೂದೆಯನ್ನು ಸಹ ಸಚಿವ ಸಂಪುಟಕ್ಕೆ ಮಂಡಿಸಿತ್ತು. ಈ ಮಸೂದೆಯೊಂದಿಗೆ ಸಚಿವ ಸಂಪುಟದ ಉಪಸಮಿತಿಯ ವರದಿಯನ್ನು ಸಚಿವ ಸಂಪುಟವು ಸರ್ವಾನುಮತದಿಂದ ಅಂಗೀಕರಿಸಿ, ಅಕ್ರಮ ಗಣಿಗಾರಿಕೆ ವಿರುದ್ಧ ಅತ್ಯಂತ ಕಠಿಣಾತಿ-ಕಠಿಣ ಕ್ರಮಗಳನ್ನು ಕೈಗೊಳ್ಳಲು ಅನುಮೋದನೆ ನೀಡಿತ್ತು.

ರಾಜ್ಯ ಸಚಿವ ಸಂಪುಟದ ನಿರ್ಣಯದಂತೆ 18.08.2025 ರಂದು ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. 21.08.2025 ರಂದು ವಿಧಾನಸಭೆಯಲ್ಲಿ ಮತ್ತು 22.08.2025 ರಂದು ವಿಧಾನ ಪರಿಷತ್ತಿನಲ್ಲಿ ಮಸೂದೆಯನ್ನು ಮಂಡಿಸಿ, ಅಂಗೀಕರಿಸಲಾಯಿತು. ಈ ವಸೂಲಾತಿ ಆಯುಕ್ತರ ನೇಮಕದಿಂದಾಗಿ ರಾಜ್ಯದಲ್ಲಿ ಆರ್ಥಿಕ ಶಿಸ್ತು ತರಲು ಸೂಕ್ತವಾದಂತಹ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ರಾಜ್ಯಪಾಲರು ಈ ಐತಿಹಾಸಿಕ ಮಸೂದೆಗೆ ಅಂಕಿತ ಹಾಕುವ ಮೂಲಕ ಸರ್ಕಾರದ ಬದ್ಧತೆಗೆ ಮುದ್ರೆ ಒತ್ತಿದ್ದಾರೆ ಎಂದು ಹೇಳಿದರು. ಈ ಮೂಲಕ ಕನ್ನಡಿಗರ ಆಸ್ತಿ ಕನ್ನಡಿಗರಿಗೆ ಮರಳಿಸುವ ಉದ್ದೇಶ ಈಡೇರಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read