ಹಾವೇರಿ: ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮಾವಿನ ಮರ ಕಡಿದು ಕಳವು ಮಾಡಿದ ಆರೋಪದ ಮೇಲೆ ಶಿಗ್ಗಾಂವಿ -ಸವಣೂರು ಶಾಸಕ ಯಾಸಿರ್ ಖಾನ್ ಪಠಾಣ್ ಸೇರಿದಂತೆ ಐದು ಮಂದಿ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾಸಿರ್ ಖಾನ್ ಪಠಾಣ್, ಮಕಬುಲ್ ಅಹಮದ್ ಖಾನ್ ಪಠಾಣ್, ಹಾನಗಲ್ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ್, ಎಡಿಎಲ್ಆರ್ ಸತ್ಯನಾರಾಯಣಪ್ಪ ಡಿ ಮತ್ತು ತಾಲೂಕು ಸರ್ವೆಯರ್ ಮಂಜುನಾಥ ಮೂಲಿಮನಿ ಅವರ ವಿರುದ್ಧ ದೂರು ದಾಖಲಾಗಿದೆ.
ಹಾನಗಲ್ ತಾಲೂಕಿನ ಹಳೆಕೋಟೆ ಗ್ರಾಮದ ಸಮೀಪ ತನ್ನ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಅಳತೆ ಮಾಡಿದ್ದಲ್ಲದೆ 25 ವರ್ಷ ಹಳೆಯ ಮಾವಿನ ಮರಗಳನ್ನು ಜೆಸಿಬಿ ಮತ್ತು ಇತರೆ ಯಂತ್ರಗಳಿಂದ ನಾಶಪಡಿಸಲಾಗಿದೆ. ಮರಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಧಾರವಾಡದ ವಕೀಲ ಫಕೀರಗೌಡ ವೀರನಗೌಡ ಪಾಟೀಲ ಅವರು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಹಾನಗಲ್ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.