ಆನ್‌ಲೈನ್ ವ್ಯವಹಾರಗಳ ಟ್ರೆಂಡ್ ಹೆಚ್ಚಾಗಿದ್ದರೂ, ನಗದು ಇನ್ನೂ ತನ್ನ ಪ್ರಾಮುಖ್ಯತೆ ಕಳೆದುಕೊಂಡಿಲ್ಲ. ಅನೇಕರು ಮನೆಯಲ್ಲಿ ಹಣ ಇಟ್ಟುಕೊಳ್ಳುವುದು ಸಹಜ. ಆದರೆ ಮನೆಯಲ್ಲಿ ದೊಡ್ಡ ಮೊತ್ತದ ನಗದು ಇದ್ದರೆ ಆದಾಯ ತೆರಿಗೆ ಇಲಾಖೆಯ ಕೆಲವು ಕಠಿಣ ನಿಯಮಗಳನ್ನು ತಿಳಿದಿರಬೇಕು. ಇಲ್ಲದಿದ್ದರೆ ಸಣ್ಣ ತಪ್ಪು ಕೂಡಾ ನಿಮ್ಮನ್ನು ಸಂಕಷ್ಟಕ್ಕೆ ದೂಡಬಹುದು!
ನಿಮ್ಮ ಮನೆಯಲ್ಲಿ ನೀವು ಎಷ್ಟೇ ಹಣ ಇಟ್ಟುಕೊಂಡರೂ ಆದಾಯ ತೆರಿಗೆ ಇಲಾಖೆಗೆ ಅದಕ್ಕೆ ಯಾವುದೇ ನಿರ್ದಿಷ್ಟ ಮಿತಿ ಇಲ್ಲ. ಆದರೆ ಆ ಹಣ ಎಲ್ಲಿಂದ ಬಂತು ಎಂಬುದಕ್ಕೆ ನೀವು ಕಡ್ಡಾಯವಾಗಿ ದಾಖಲೆ ಹೊಂದಿರಬೇಕು. ತನಿಖಾಧಿಕಾರಿಗಳು ಪ್ರಶ್ನಿಸಿದರೆ, ಆ ಹಣದ ಮೂಲವನ್ನು ನೀವು ಸ್ಪಷ್ಟವಾಗಿ ತಿಳಿಸಬೇಕು ಮತ್ತು ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ವಿವರಗಳನ್ನು ನೀಡಬೇಕಾಗುತ್ತದೆ.
ಒಂದು ವೇಳೆ ನೀವು ಹಣದ ಮೂಲವನ್ನು ಸಮರ್ಪಕವಾಗಿ ವಿವರಿಸಲು ವಿಫಲರಾದರೆ, ಆಗ ಆದಾಯ ತೆರಿಗೆ ಇಲಾಖೆ ನಿಮ್ಮ ತೆರಿಗೆ ಪಾವತಿಯನ್ನು ಪರಿಶೀಲಿಸುತ್ತದೆ. ಲೆಕ್ಕದಲ್ಲಿ ತೋರಿಸದ ಹಣ ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಬಹುದು ಮತ್ತು ಭಾರಿ ದಂಡವನ್ನು ವಿಧಿಸುವ ಸಾಧ್ಯತೆ ಇದೆ.
ನೀವು ಆಗಾಗ ಸುದ್ದಿಗಳಲ್ಲಿ ನೋಡುವಂತೆ, ಅಧಿಕಾರಿಗಳು ಮತ್ತು ಉದ್ಯಮಿಗಳ ಮನೆಗಳ ಮೇಲೆ ಐಟಿ ದಾಳಿ ನಡೆದು ಕೋಟಿಗಟ್ಟಲೆ ನಗದು ಪತ್ತೆಯಾಗುತ್ತದೆ. ಇದು ಅನಧಿಕೃತ ಹಣವಾಗಿದ್ದು, ಅದರ ಮೂಲವನ್ನು ತಿಳಿಸಲು ಸಾಧ್ಯವಾಗದಿದ್ದಾಗ ಹಣವನ್ನು ಜಪ್ತಿ ಮಾಡಲಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ. ಹಾಗಾಗಿ ಮನೆಯಲ್ಲಿರುವ ಪ್ರತಿಯೊಂದು ರೂಪಾಯಿಗೂ ಸರಿಯಾದ ದಾಖಲೆ ಇರಲಿ.
ಕೇಂದ್ರೀಯ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ನಿಯಮಗಳ ಪ್ರಕಾರ, ನೀವು ಬ್ಯಾಂಕ್ ಖಾತೆಯಿಂದ ಒಂದೇ ಬಾರಿಗೆ ₹ 50,000 ಕ್ಕಿಂತ ಹೆಚ್ಚು ನಗದು ಹಿಂತೆಗೆದುಕೊಂಡರೆ ಅಥವಾ ಠೇವಣಿ ಮಾಡಿದರೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ತೋರಿಸಬೇಕು.
ಇದಲ್ಲದೆ, ಕಳೆದ ಮೂರು ವರ್ಷಗಳಿಂದ ಐಟಿಆರ್ ಸಲ್ಲಿಸದ ವ್ಯಕ್ತಿಯು ಒಂದು ಹಣಕಾಸು ವರ್ಷದಲ್ಲಿ ₹ 20 ಲಕ್ಷಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕಿನಿಂದ ಹಿಂತೆಗೆದುಕೊಂಡರೆ, ಆ ವಹಿವಾಟುಗಳಿಗೆ 2% ಟಿಡಿಎಸ್ ಮತ್ತು ₹ 1 ಕೋಟಿಗಿಂತ ಹೆಚ್ಚಿನ ವಹಿವಾಟುಗಳಿಗೆ 5% ಟಿಡಿಎಸ್ ಪಾವತಿಸಬೇಕಾಗುತ್ತದೆ. ಐಟಿಆರ್ ಸಲ್ಲಿಸಿದವರಿಗೆ ₹ 1 ಕೋಟಿ ವರೆಗಿನ ಹಿಂಪಡೆಯುವಿಕೆಗೆ ಟಿಡಿಎಸ್ ಇರುವುದಿಲ್ಲ, ಆದರೆ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ 2% ಟಿಡಿಎಸ್ ಪಾವತಿಸಬೇಕಾಗುತ್ತದೆ. ಆದ್ದರಿಂದ ನಗದು ವ್ಯವಹಾರ ಮಾಡುವಾಗ ಈ ನಿಯಮಗಳನ್ನು ನೆನಪಿಟ್ಟುಕೊಳ್ಳುವುದು ಜಾಣತನ.