ಕಲಬುರಗಿ: ಕಲಬುರಗಿ ಜಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿದ್ದ ರೋಗಿಯ ಗ್ಲುಕೋಸ್ ಪೈಪ್ ಕಳಚಿ ತೀವ್ರ ರಕ್ತಸ್ರಾವವಾಗಿದೆ. ನಂತರ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಸಾವನ್ನಪ್ಪಿದ್ದಾರೆ.
ಕಲಬುರಗಿ ತಾಲೂಕಿನ ಮೇಳಕುಂದ ಗ್ರಾಮದ ಸಿದ್ದಣ್ಣ ಎಂಬುವರು ಮೃತಪಟ್ಟಿದ್ದಾರೆ. ವಿಷ ಸೇವಿಸಿದ್ದ ಸಿದ್ದಣ್ಣ ಅವರನ್ನು ನಾಲ್ಕು ದಿನಗಳ ಹಿಂದೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ತಡರಾತ್ರಿ ಗ್ಲುಕೋಸ್ ಪೈಪ್ ಕಳಚಿ ತೀವ್ರ ರಕ್ತಸ್ರಾವವಾಗಿದ್ದು, ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಗುಣಮುಖರಾಗುತ್ತಿದ್ದ ವೇಳೆ ರಕ್ತಸ್ರಾವದಿಂದ ಸಿದ್ದಣ್ಣ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆದರೆ, ಸಿದ್ದಣ್ಣ ಕುಟುಂಬದವರ ಈ ಆರೋಪವನ್ನು ವೈದ್ಯರು ಅಲ್ಲಗಳೆದಿದ್ದಾರೆ. ಹೃದಯಾಘಾತದಿಂದ ಸಿದ್ದಣ್ಣ ಮೃತಪಟ್ಟಿರುವುದಾಗಿ ಹೇಳಿದ್ದಾರೆ.