ಇಸ್ಲಾಮಾಬಾದ್: ಭಾರತ-ಪಾಕಿಸ್ತಾನದ ನಡುವೆ ಸಂಘರ್ಷದ ಬಳಿಕ ಕದನ ವಿರಾಮ ಘೋಷಣೆಯಾಗಿದೆ. ಯುದ್ಧದ ವೇಳೆ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ಹಲವು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಈ ನಡುವೆ ಭಾರತ ಪಾಕಿಸ್ತಾನದ ಪರಮಾಣು ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂಬ ಸುದ್ದಿ ಹರಡಿತ್ತು.
ಆದರೆ ಭಾರತ ಪಾಕಿಸ್ತಾನದಲ್ಲಿರುವ ಯಾವುದೇ ಪರಮಾಣು ಕೇಂದ್ರಗಳನ್ನು ಹಾನಿ ಮಾಡಿಲ್ಲ ಎಂದು ಭಾರತೀಯ ಸೇನೆ ತಿಳಿಸಿಸಿತ್ತು. ಇದೀಗ ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯಾದ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ-IAEA ಕೂಡ ಪಾಕಿಸ್ತಾನದ ಯಾವುದೇ ಪರಮಾಣು ಕೇಂದ್ರ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ ಸಿಮ್ಧೂರ್ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಕಿರಾನಾ ಬೆಟ್ಟಗಳಲ್ಲಿ ವಿಕಿರಾಗಳು ಸೋರಿಕೆಯಾಗಿವೆ ಎಂಬ ವದಂತಿ ಹರಿದಾಡಿತ್ತು. ಆದರೆ ಅದು ಸುಳ್ಳು ಎಂಬುದನ್ನು ಐಎಇಎ ಸ್ಪಷ್ಟ ಪಡಿಸಿದೆ.
ಪಾಕಿಸ್ತಾನದಲ್ಲಿ ಯಾವುದೇ ಪರಮಾಣು ಸ್ಥಾವರದಿಂದ ವಿಕಿರಣ ಸೋರಿಕೆ ಅಥವಾ ಹೊರಸೂಸುವಿಕೆಯ ಯಾವುದೇ ಘಟನೆ ನಡೆದಿಲ್ಲ ಎಂದು ಅಂತರಾಷ್ಟ್ರೀಯ ಪರಮಣು ಶಕ್ತಿ ಸಂಸ್ಥೆ ಪತ್ರಿಕಾ ವಿಭಾಗದ ಫೆಡ್ರಿಕ್ ಡಹ್ಲ್ ತಿಳಿಸಿದ್ದಾರೆ.