ಕೊಯಮತ್ತೂರು: ಹೊಸ ಪಕ್ಷ ಆರಂಭಿಸುವ ಕುರಿತಾದ ವದಂತಿಗಳನ್ನು ತಳ್ಳಿ ಹಾಕಿರುವ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಪಕ್ಷದೊಳಗಿನ ಕೆಲವು ವಿಚಾರಗಳಲ್ಲಿ ಅಸಮಾಧಾನ ಇರುವುದನ್ನು ಒಪ್ಪಿಕೊಂಡಿದ್ದಾರೆ.
ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ನಾನು ಇಷ್ಟವಿದ್ದರೆ ಪಕ್ಷದಲ್ಲಿ ಇರುತ್ತೇನೆ. ಬೇಡವೆನಿಸಿದರೆ ಕೃಷಿ ಮಾಡುತ್ತೇನೆ. ರಾಜಕೀಯ ಸ್ವಯಂಪ್ರೇರಿತ ಕ್ಷೇತ್ರವಾಗಿದ್ದು, ಇಲ್ಲಿ ನಮ್ಮ ಹಣವನ್ನೇ ನಾವು ಖರ್ಚು ಮಾಡುತ್ತೇವೆ. ತಲೆಯ ಮೇಲೆ ಬಂದೂಕು ಹಿಡಿದು ಯಾರನ್ನೂ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಸ್ವಚ್ಛ ರಾಜಕೀಯ ತರುವರು ಎನ್ನುವ ವಿಶ್ವಾಸವೇ ನಾನು ಬಿಜೆಪಿಗೆ ಸೇರಲು ಕಾರಣ. ಆ ನಂಬಿಕೆ ಇಲ್ಲದಿದ್ದರೆ ನಾನು ಉದ್ಯೋಗ ಬಿಟ್ಟು ರಾಜಕೀಯಕ್ಕೆ ಬರಬೇಕಾದ ಅಗತ್ಯವೇ ಇರಲಿಲ್ಲ. ರಾಜಕೀಯ ಹಿನ್ನೆಲೆ ಇಲ್ಲದ ಕೃಷಿಕ ಕುಟುಂಬದಿಂದ ಬಂದ ನನಗೆ ನನ್ನ ಇತಿಮಿತಿಗಳು ಗೊತ್ತಿವೆ. ಹೊಸ ಪಕ್ಷ ಪ್ರಾರಂಭಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಕೆಲವೊಮ್ಮೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾತನಾಡಬೇಕಾಗುತ್ತದೆ. ಆದರೂ ಕೆಲವು ವಿಷಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಕಾದು ನೋಡೋಣ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
