ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯ ಮನೆಯ ಮೇಲ್ಛಾವಣಿಯ ಮೇಲೆ ಡ್ರಮ್ ಒಳಗೆ ಮುಚ್ಚಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾಗಿದೆ.
ಮೃತನನ್ನು ಹಂಸ್ರಾಮ್ ಎಂದು ಗುರುತಿಸಲಾಗಿದೆ. ಅವರು ಮೂಲತಃ ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯವರಾಗಿದ್ದರೂ, ಕಿಶನ್ಗಢಬಾಸ್ನ ಆದರ್ಶ ಕಾಲೋನಿ ಪ್ರದೇಶದಲ್ಲಿ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ನೆರೆಹೊರೆಯವರು ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಹರಿತವಾದ ಆಯುಧದಿಂದ ಗಂಟಲಿನ ಮೇಲೆ ಗಾಯವಾಗಿ ಮೃತದೇಹ ಪತ್ತೆಯಾಗಿದೆ.
“ದೇಹ ಕೊಳೆಯುವುದನ್ನು ವೇಗಗೊಳಿಸಲು ಅದರ ಮೇಲೆ ಉಪ್ಪು ಹಾಕಲಾಗಿತ್ತು” ಎಂದು ಡಿಎಸ್ಪಿ ರಾಜೇಂದ್ರ ಸಿಂಗ್ ನಿರ್ವಾನ್ ಹೇಳಿದ್ದಾರೆ. ಹಂಸ್ರಾಮ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಕಳೆದ ಒಂದೂವರೆ ತಿಂಗಳಿನಿಂದ ಆದರ್ಶ ಕಾಲೋನಿಯಲ್ಲಿ ಬಾಡಿಗೆಗೆ ಪಡೆದಿರುವ ಕೋಣೆಯಲ್ಲಿ ವಾಸಿಸುತ್ತಿದ್ದರು. ಅವರು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದರು. ಮದ್ಯದ ಚಟ ಹೊಂದಿದ್ದರಲ್ಲದೆ, ತಮ್ಮ ಮನೆ ಮಾಲೀಕರ ಮಗ ಜಿತೇಂದ್ರ ಜೊತೆ ಮದ್ಯಪಾನ ಮಾಡುತ್ತಿದ್ದರು ಎಂದು ಹೇಳಿದ್ದರು. ಶನಿವಾರ ಸಂಜೆಯಿಂದ ಅವರು ನಾಪತ್ತೆಯಾಗಿದ್ದಾರೆ. ಕಾಣೆಯಾದ ವ್ಯಕ್ತಿಗಳ ಹುಡುಕಾಟಕ್ಕಾಗಿ ಪೊಲೀಸರು ತನಿಖೆ ಆರಂಭಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಅಧಿಕೃತ ದೂರು ಕೂಡ ದಾಖಲಾಗಿದೆ. “ಮೃತರು ಮದ್ಯದ ಚಟ ಹೊಂದಿದ್ದರು ಮತ್ತು ಆಗಾಗ್ಗೆ ಜಿತೇಂದ್ರ ಜೊತೆ ಮದ್ಯಪಾನ ಮಾಡುತ್ತಿದ್ದರು. ಶನಿವಾರ ಸಂಜೆಯಿಂದ, ಜಿತೇಂದ್ರ ಮತ್ತು ಹಂಸ್ರಾಮ್ ಅವರ ಕುಟುಂಬಗಳು ಪತ್ತೆಯಾಗಿಲ್ಲ” ಎಂದು ಡಿಎಸ್ಪಿ ಹೇಳಿದರು.