ಚಿತ್ರದುರ್ಗ: ಊಟ ಸರಿಯಿಲ್ಲ ಎಂದು ಪತ್ನಿಯ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿಯಲು ಯತ್ನಿಸಿದ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.
ಚಳ್ಳಕೆರೆಯ ತ್ಯಾಗರಾಜನಗರದಲ್ಲಿ ವಾಸವಾಗಿರುವ ವೀರದಿಮ್ಮನಹಳ್ಳಿಯ ಅಂಗನವಾಡಿ ಶಿಕ್ಷಕಿ ಲಲಿತಾಬಾಯಿ(33) ಅವರ ಮೇಲೆ ಹಲ್ಲೆ ಮಾಡಲಾಗಿದೆ. ಮೇ 12ರಂದು ಬೆಳಿಗ್ಗೆ 10 ಗಂಟೆಗೆ ಲಲಿತಾಬಾಯಿ ಪತಿ ಹನುಮಂತಪ್ಪನಿಗೆ ಊಟ ಬಡಿಸಿ ಕೊಟ್ಟಿದ್ದಾರೆ. ಊಟ ಸರಿಯಿಲ್ಲವೆಂದು ಗಲಾಟೆ ತೆಗೆದ ಹನುಮಂತಪ್ಪ ಎರಡನೇ ಪತ್ನಿಯಾಗಿರುವ ಲಲಿತಾಬಾಯಿಯನ್ನು ರೂಮಿಗೆ ಕರೆದುಕೊಂಡು ಹೋಗಿ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಚಾಕು ತೆಗೆದು ಕುತ್ತಿಗೆಗೆ ಹಾಕಲು ಯತ್ನಿಸಿದಾಗ ತಪ್ಪಿಸಿಕೊಂಡು ಲಲಿತಾಬಾಯಿ ಹೊರಗೆ ಬಂದಿದ್ದು, ಆಕೆಯ ಎಡಗಣ್ಣಿಗೆ ಗಾಯವಾಗಿದೆ.
ಸಹಾಯಕ್ಕಾಗಿ ಕೂಗಿಕೊಂಡಾಗ ಮನೆಯಲ್ಲಿದ್ದ ನಾದಿನಿ ಸರೋಜಮ್ಮ, ಮೈದುನ ಕುಮಾರ್ ಕೂಡ ಲಲಿತಾಬಾಯಿ ಅವರನ್ನು ಎಳೆದಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಸಂಬಂಧಿಕರ ಸಹಾಯದಿಂದ ಲಲಿತಾಬಾಯಿ ಪಾರಾಗಿ ಚಿತ್ರದುರ್ಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಗೆ ಲಲಿತಾಬಾಯಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿದ್ದಾರೆ.