ಕೊಪ್ಪಳ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಘಟನೆ ಕೊಪ್ಪಳ ತಾಲೂಕಿನ ಬೂದಗುಂಪಾದಲ್ಲಿ ನಡೆದಿದೆ.
ದ್ಯಾಮಣ್ಣ ವಜ್ರಬಂಡಿ(38) ಕೊಲೆಯಾದ ವ್ಯಕ್ತಿ. ಆತನ ಪತ್ನಿ ನೇತ್ರಾವತಿ, ಪ್ರಿಯಕರ ಶಾಮಣ್ಣನೊಂದಿಗೆ ಸೇರಿ ಕೊಲೆ ಮಾಡಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜುಲೈ 25ರಂದು ಪ್ರಿಯಕರ ಶಾಮಣ್ಣನ ಜೊತೆ ಸೇರಿ ನೇತ್ರಾವತಿ ತಮ್ಮ ಜಮೀನಿನಲ್ಲಿಯೇ ರಾಡ್ ನಿಂದ ಹಲ್ಲೆ ನಡೆಸಿ ದ್ಯಾಮಣ್ಣ ಕೊಲೆ ಮಾಡಿದ್ದು ಐದು ಕಿಲೋಮೀಟರ್ ದೂರದವರೆಗೆ ಶವ ಕೊಂಡೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.
ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿಯಾಗಿರುವ ಆರೋಪಿ ಶಾಮಣ್ಣ ಅದೇ ಗ್ರಾಮದ ನೇತ್ರಾವತಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಬೂದಗುಂಪಾ ಗ್ರಾಮದ ದ್ಯಾವಣ್ಣನ ಜೊತೆಗೆ ನೇತ್ರಾವತಿ ಮದುವೆ ಮಾಡಿಕೊಡಲಾಗಿದ್ದು, ಮೂವರು ಮಕ್ಕಳಿದ್ದಾರೆ. ಆದರೂ ಇಬ್ಬರ ಅಕ್ರಮ ಸಂಬಂಧ ಮುಂದುವರೆದಿತ್ತು. ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಳೆ.
ಬೂದುಗುಂಪಾದ ಗ್ಯಾರೇಜ್ ವೊಂದರಲ್ಲಿ ಲಾರಿ ಚಕ್ರ ಬದಲಾಯಿಸಬೇಕೆಂದು ಶಾಮಣ್ಣ ರಾಡ್ ಪಡೆದುಕೊಂಡು ಅದೇ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ರಾಡ್ ವಾಪಸ್ ಕೊಟ್ಟಿದ್ದಾನೆ. ಜುಲೈ 25ರಂದು ಗಂಡನನ್ನು ಕೊಲೆ ಮಾಡಿದ್ದ ಪತ್ನಿ ನೇತ್ರಾವತಿ 5 ದಿನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮನೆಯಲ್ಲಿ ಇದ್ದಳು. ಗಂಡನ ಬಗ್ಗೆ ವಿಚಾರಿಸಿದಾಗ ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ಕತೆ ಕಟ್ಟಿದಳು. ಇದರಿಂದ ಅನುಮಾನಗೊಂಡ ದ್ಯಾಮಣ್ಣನ ಸಹೋದರರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿಚಾರಣೆಯ ಬಳಿಕ ನೇತ್ರಾವತಿ ಕೊಲೆ ವಿಚಾರ ತಿಳಿಸಿದ್ದಾಳೆ. ನೇತ್ರಾವತಿ ಮತ್ತು ಆಕೆಯ ಪ್ರಿಯಕರ ಶಾಮಣ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಅಪರಿಚಿತ ಶವ ಪತ್ತೆಯಾದಾಗ ಗುರುತು ಸಿಗದ ಹಿನ್ನೆಲೆಯಲ್ಲಿ ಕೊಪ್ಪಳದ ಮುನಿರಾಬಾದ್ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದರು.