ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದು ಎಸ್ಕೇಪ್ ಆಗಿದ್ದ ಪತ್ನಿಯನ್ನು ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಕೊಲೆಯಾದ ವ್ಯಕ್ತಿ. ಶರಣಮ್ಮ ಪತಿಯನ್ನೇ ಹತ್ಯೆಗೈದಿದ್ದ ಪತ್ನಿ. ಯಾದಗಿರಿ ಮೂಲದವರಾದ ಸುರೇಶ್ ಹಾಗೂ ಶರಣಮ್ಮ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ವೇಳೆ ಶರಣಮ್ಮನಿಗೆ ವೀರಭದ್ರ ಎಂಬ ಅಪ್ರಾಪ್ತ ಯುವಕನ ಪರಿಚಯವಾಗಿ ಇಬ್ಬರೂ ಪ್ರೀತಿತಿಸಲಾರಂಭಿಸಿದ್ದಾರೆ.
ಆರೇಳು ತಿಂಗಳಿಂದ ಇಬ್ಬರ ನಡುವೆ ನಡೆಯುತ್ತಿದ್ದ ಪ್ರೀತಿ-ಪ್ರೇಮ ಹುಚ್ಚಾಟ, ಒಂದು ದಿನ ರೆಡ್ ಹ್ಯಾಂಡ್ ಆಗಿ ಪತಿ ಸುರೇಶ್ ಕೈಗೆ ಸಿಕ್ಕಿ ಬೀಳುವ ಹಂತ ತಲುಪಿದೆ. ಇಬ್ಬರೂ ಸಿಕ್ಕಿ ಬಿದ್ದಾಗ ಪತಿ ಸುರೇಶ್, ಪತ್ನಿ ಶರಣಮ್ಮಗೆ ಬುದ್ಧಿ ಹೇಳಿದ್ದಾನೆ. ವಿಷಯ ಪತಿಗೆ ತಿಳಿದಿದ್ದಕ್ಕೆ ಶರಣಮ್ಮ ಹಾಗೂ ಪ್ರಿಯಕರ ವೀರಭದ್ರ ಸೇರಿ ಸುರೇಶ್ ಕೊಲೆಗೆ ಸಂಚು ರೂಪಿಸಿದ್ದಾರೆ. ನ.19ರಂದು ಕಂಠಪೂರ್ತಿ ಕುಡಿದು ಮಲಗಿದ್ದ ಸುರೇಶ್ ನನ್ನು ಶರಣಮ್ಮ-ವಿರಭದ್ರ ಸೇರಿ ಕೊಲೆಗೈದಿದ್ದಾರೆ. ಬಳಿಕ ವೀರಭದ್ರ ತನ್ನ ಗೆಳೆಯ ಅನಿಲ್ ಎಂಬಾತನಿಗೆ ಕರೆ ಮಾಡಿ ಕಾರಿನಲ್ಲಿ ಸುರೇಶ್ ಶವವನ್ನು ನಿರ್ಜನ ಪ್ರದೇಶಕ್ಕೆ ಸಾಗಿಸಿ ಪೆಟ್ರೋಲ್ ಸುರಿದು ಶವ ಸುಟ್ಟುಹಾಕಿದ್ದಾರೆ.
ಮೂರು ದಿನಗಳ ಬಳಿಕ ಶರಣಮ್ಮ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ನೂರಾರು ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಒಂದು ಕಾರಿನ ಓಡಾಟದ ಬಗ್ಗೆ ಅನುಮಾನಗೊಂಡಿದ್ದರು. ಶರಣಮ್ಮ ಹಾಗೂ ಆಕೆಯ ಪ್ರಿಯಕರನನ್ನು ವಿಚಾರಣೆಗೊಳಪಡಿಸಿದಾಗ ತಾವೇ ಸುರೇಶ್ ನನ್ನು ಹತ್ಯೆಗೈದಿದ್ದನ್ನು ಬಾಯ್ಬಿಟ್ಟಿದ್ದಾರೆ. ಸದ್ಯ ಶರಣಮ್ಮ, ವೀರಭದ್ರ ಹಾಗೂ ಅನಿಲ್ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
