ಚಿಕ್ಕಬಳ್ಳಾಪುರ : ಪತಿ ಹಾಗೂ ಮನೆಯವರು ನೀಡಿದ ಕಿರುಕುಳಕ್ಕೆ ಮನನೊಂದು ವಿಡಿಯೋ ಮಾಡಿಟ್ಟು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯಿರುವ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ.
ಹೌದು, ಪತಿ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿಯೊಬ್ಬರು ವಿಶ್ವೇಷ್ವರಯ್ಯ ಪಿಕಪ್ ಡ್ಯಾಂ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.ತಪಸ್ಸಿನಹಳ್ಳಿಯ ಮಹಿಳೆ ಪುಷ್ಪವತಿ (30) ಆತ್ಮಹತ್ಯೆಗೆ ಶರಣಾದವರು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಪುಷ್ಪವತಿ 11 ತಿಂಗಳ ಹಿಂದಷ್ಟೇ ವೇಣು ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾಗಿ ಬಂದಾಗಿನಿಂದ ಪತಿ ಹಾಗೂ ಅತ್ತೆ-ಮಾವ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು.
ಸಾವಿಗೂ ಮುನ್ನ ಪುಷ್ಪವತಿ ಪತಿ ಹಾಗೂ ಅತ್ತೆ-ಮಾವನ ಕಿರುಕುಳ ನೀಡುತ್ತಿರುವ ಬಗ್ಗೆ ನಿವೇಶನ ಕೊಡಿಸುವಂತೆ ಹಾಗೂ ಹಣ ತೆಗೆದುಕೊಂಡು ಬರುವಂತೆ ಪ್ರತಿದಿನ ಹಿಂಸಿಸುತ್ತಿರುವ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಡೆತ್ ನೋಟ್ ಕೂಡ ಬರೆದಿಟ್ಟು ಪುಷ್ಪವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗಂಡನಿಗೆ ಎರಡನೇ ಮದುವೆಯಾಗುವ ಆಸೆಯಿದ್ದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರಂತೆ. ಮೈದುನನ ಜೊತೆ ಮಲಗುವಂತೆಯೂ ಬಲವಂತ ಮಾಡಿದ್ದಾರೆ ಎಂದು ಆರೋಪ ಮಾಡಿ ಗೃಹಿಣಿ ಪುಷ್ಪ 8 ನಿಮಿಷಗಳ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ ಹಾಗೂ ಮೈದುನ ನಾರಾಯಣಸ್ವಾಮಿ ಸೇರಿದಂತೆ ಸಂಬಂಧಿಕಾರಾದ ಮುತ್ತೇಗೌಡ ಹಾಗೂ ಪಲ್ಲವಿ ಅವರ ಕಿರುಕುಳವೇ ನನ್ನ ಸಾವಿಗೆ ಕಾರಣ. ಅವರಿಗೆ ತಕ್ಕ ಶಿಕ್ಷೆ ಕೊಡಿಸಿ, ನನ್ನ ದೇಹವನ್ನು ಗಂಡನ ಮನೆಯೊಳಗೆ ಮಣ್ಣು ಮಾಡುವಂತೆ ವಿಡಿಯೋದಲ್ಲಿ ಆಗ್ರಹಿಸಿದ್ದಾರೆ.