BIG NEWS : ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ , ಇನ್ಮುಂದೆ ಆಯಾ ಜಿಲ್ಲಾ ಕೇಂದ್ರಗಳಲ್ಲಿಯೇ ವಿಚಾರಣೆ.!

ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಹಾಗೂ ಜನರು ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ವಿಚಾರಣೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ತಿಳಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣ ವಿಲೇವಾರಿ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈಗಾಗಲೇ 24 ಜಿಲ್ಲೆಗಳಲ್ಲಿ ವಿಚಾರಣೆ ನಡೆಸಿದ್ದು ಇನ್ನು 8 ಜಿಲ್ಲೆಗಳು ಬಾಕಿ ಇದೆ ಎಂದರು.

ಮಾನವ ಹಕ್ಕುಗಳ ಸಂರಕ್ಷಣೆ ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಆಯೋಗವು ಸರ್ಕಾರ/ಸರ್ಕಾರಿ ಸಂಸ್ಥೆಗಳಿಂದ ಆಗಿರುವ ಮಾನವ ಹಕ್ಕುಗಳ ಕುರಿತಾದ ದೂರನ್ನು ಸ್ವೀಕರಿಸಿ, ವಿಚಾರಣೆ ನಡೆಸಿ, ತೀರ್ಮಾನ ಕೈಗೊಂಡು ಶಿಸ್ತಿನ ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಹಾಗೂ ಕೆಲವು ಪ್ರಕರಣಗಳಲ್ಲಿ ದೂರುದಾರರು, ನೊಂದವರಿಗೆ ಪರಿಹಾರ ನೀಡಲು ಶಿಫಾರಸು ಮಾಡುತ್ತದೆ ಎಂದರು.

ಮಾನವ ಹಕ್ಕುಗಳ ವ್ಯಾಪ್ತಿ ಅತಿ ವಿಸ್ತಾರವಾಗಿರುವುದರಿಂದ ದೂರುಗಳ ಸಂಖ್ಯೆ ಸಹ ಹೆಚ್ಚಿದೆ. ಆದ್ದರಿಂದ ಜಿಲ್ಲೆಗಳಿಂದ ವಾಸ್ತವಿಕ ವರದಿಗಳನ್ನು ಬೇಗ ಕಳುಹಿಸಿದರೆ ಶೀಘ್ರ ವಿಲೇವಾರಿ ಸಾಧ್ಯವಾಗುತ್ತದೆ ಎಂದರು.

ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡಿದ ಸಮಯದಲ್ಲಿ ಅಧಿಕಾರಿ/ಸಿಬ್ಬಂದಿಗಳು ಸೌಜನ್ಯದಿಂದ ಮಾತನಾಡಿದರೆ ಶೇ.50 ಸಮಸ್ಯೆ ಬಗೆಹರಿಯುತ್ತದೆ ಎಂದ ಅವರು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದರು.

ಮೆಗ್ಗಾನ್ ಆಸ್ಪತ್ರೆ ಭೇಟಿ ಸಮಯದಲ್ಲಿ ರೋಗಿ ಜೊತೆ ಇರುವ ಸಹಾಯಕರಿಗೆ ರಾತ್ರಿ ತಂಗಲು ಡಾರ್ಮಿಟರಿ ಅವಶ್ಯವಿದೆ ಎಂದು ಸಾರ್ವಜನಿಕರು ತಿಳಿಸಿದ್ದು, ಈ ಕುರಿತು ಚರ್ಚಿಸಲಾಗಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಶೀಘ್ರದಲ್ಲೇ ರೂ.5 ಕೋಟಿ ಅನುದಾನದಲ್ಲಿ ಡಾರ್ಮಿಟರಿ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಹಾಗೂ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಸಮಸ್ಯೆ ಕುರಿತು ಬಸ್ ಮಾಲೀಕರು ತಮ್ಮ ಗಮನಕ್ಕೆ ತಂದಿದ್ದು, ಪಾಲಿಕೆ ಆಯುಕ್ತರು ಅವರೊಂದಿಗೆ ಒಂದು ಸಭೆ ನಡೆಸಿ ಚರ್ಚಿಸುವಂತೆ ಸೂಚಿಸಿದರು.

ಜಿಲ್ಲಾ ಕಾರಾಗೃಹಕ್ಕೆ ಖೈದಿಗಳ ಬಂಧುಗಳು ಭೇಟಿ ನೀಡಲು ಬಸ್ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಕೇಳಿಕೊಂಡಿದ್ದು, ಕೆಎಸ್‌ಆರ್‌ಟಿಸಿ ವತಿಯಿಂದ ಖೈದಿಗಳ ಭೇಟಿ ಸಮಯದಲ್ಲಿ ಒಂದು ಬಸ್ ವ್ಯವಸ್ಥೆ ಮಾಡಬೇಕೆಂದು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಪ್ರೊಫೆಸರ್ ಓರ್ವರ ವಿರುದ್ದ ಮಹಿಳೆಯೊಬ್ಬರು ಮಾಡಿರುವ ಲೈಂಗಿಕ ದೌರ್ಜನ್ಯ ಮತ್ತು ಹಣ ಪಡೆದ ಪ್ರಕರಣ ಗಂಭೀರವಾಗಿದ್ದು ಈ ಬಗ್ಗೆ ವಿಶ್ವವಿದ್ಯಾಲಯದ ವತಿಯಿಂದ ಒಂದು ಸಮಿತಿ ರಚಿಸಿ ಪರಿಶೀಲಿಸಬೇಕು. ನಂತರ ಸಮರ್ಪಕವಾದ ವರದಿಯನ್ನು ಆಯೋಗಕ್ಕೆ ನೀಡಬೇಕೆಂದು ಸೂಚಿಸಿದರು.

ಮಾನವ ಹಕ್ಕುಗಳ ಹೋರಾಟ ಸಮಿತಿ, ಮಾನವ ಹಕ್ಕುಗಳ ಸಂಘ ಹೀಗೆ ಮಾನವ ಹಕ್ಕುಗಳ ಹೆಸರಿನ ನಕಲಿ ಸಂಸ್ಥೆಗಳು ಅಧಿಕಾರಿಗಳನ್ನು ಹೆದರಿಸಿ ಕೆಲಸ ಮಾಡಿಸುತ್ತಿವೆ. ಈ ಬಗ್ಗೆ ಅಧಿಕಾರಿಗಳು, ಸಾರ್ವಜನಿಕರು ಜಾಗೃತರಾಗಿರಬೇಕು. ಇಂತಹ ನಕಲಿ ಸಂಸ್ಥೆಗಳ ಕುರಿತು ಡಿಜಿಪಿ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಬಗ್ಗೆ ಚರ್ಚಿಸಿದ್ದೇವೆ. ಈ ರೀತಿ ನಕಲಿ ಸಂಸ್ಥೆಗಳು ತಮ್ಮ ಭೇಟಿ ಮಾಡಿದ್ದಲ್ಲಿ ನಮ್ಮ ಗಮನಕ್ಕೆ ತರಬೇಕೆಂದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ಮಾತನಾಡಿ, ಮಾನವನಿಗೆ ಜನ್ಮತಃ ಬಂದAತಹ ಹಕ್ಕುಗಳೇ ಮಾನವ ಹಕ್ಕುಗಳಾಗಿದ್ದು ಮೂಲಭೂತ ಹಕ್ಕೂಗಳೂ ಸೇರಿದಂತೆ ಇದರ ವ್ಯಾಪ್ತಿ ವಿಸ್ತಾರವಾಗಿದೆ. ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸುವುದು, ಈ ಹಕ್ಕುಗಳ ಉಲ್ಲಂಘನೆಯಾಗದAತೆ ನೋಡಿಕೊಳ್ಳುವುದು ಹಾಗೂ ಉಲ್ಲಂಘನೆಯಾದಲ್ಲಿ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುವುದು ಆಯೋಗದ ಮುಖ್ಯ ಕಾರ್ಯವಾಗಿದೆ ಎಂದ ಅವರು ಸಾರ್ವಜನಿಕ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾದರೆ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಜಿಲ್ಲೆಯಲ್ಲಿ ಸಾರ್ವಜನಿಕ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಎಸ್‌ಪಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದರು.

**********

ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳು ಉತ್ತಮವಾಗಿದ್ದು ತಾವು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಚತೆ, ಇತರೆ ಸೌಲಭ್ಯ ಉತ್ತಮವಾಗಿದ್ದು ಸಿಬ್ಬಂದಿ ಕೊರತೆ ಇಲ್ಲ. ಸರ್ಕಾರಿ ವಿದ್ಯಾರ್ಥಿ ನಿಲಯಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕಾರಾಗೃಹ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಣ್ಣ ಪುಟ್ಟ ದೋಷಗಳಿದ್ದು ಅವುಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ.

ಶ್ಯಾಮ್ ಭಟ್, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read