ಹುಬ್ಬಳ್ಳಿ: ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದವರಿಗೆ ಬಿಗ್ ಶಾಕ್ ಎದುರಾಗಿದ್ದು, ಬರೋಬ್ಬರಿ 47 ಮನೆಗಳನ್ನು ತೆರವುಗೊಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಉದಯನಗರದಲ್ಲಿ ಜೆಸಿಬಿ ಘರ್ಜಿಸಿದ್ದು, 47 ಮನೆಗಳನ್ನು ನೆಲಸಮಗೊಳಿಸಿದೆ. ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ಕೆಡವಲಾಗಿದೆ. ದಾಖಲೆಗಳನ್ನು ನೋಡದೇ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದ ಜನರು ಬೀದಿಗೆ ಬೀದಿದ್ದಾರೆ.
ಸಿಕಂದರ್ ಎಂಬಾತ ತನ್ನದೇ ಜಾಗ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಲವರಿಗೆ ನಿವೇಶನಗಳನ್ನು ಹಂಚಿದ್ದ. ಲಕ್ಷ ಲಕ್ಷ ಹಣ ನೀಡಿ ಜಾಗ ಪಡೆದಿದ್ದ ಜನರು, ಇದನ್ನು ನಂಬಿ ಉದಯನಗರದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದರು. ಆದರೆ ರಾಮದಾಸ್ ಸಬನಿ ಎಂಬುವವರು ಇದು ತನಗೆ ಸೇರಿದ ಜಾಗ ಸಿಕಂದರ್ ಎಂಬಾತ ಸುಳ್ಳು ಹೇಳಿ ತನ್ನ ಜಾಗವನ್ನು ಮಾರಾಟ ಮಾಡಿದ್ದು, ಅಕ್ರಮವಾಗಿ ಮನೆಗಳನ್ನು ಕಟ್ಟಲಾಗಿದೆ ಎಂದು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು.
ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮನೆಗಳನ್ನು ನೆಲಸಮಗೊಳಿಸಿ ರಾಮದಾಸ್ ಅವರಿಗೆ ಜಾಗ ಬಿಟ್ಟುಕೊಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಇದೀಗ ಅಕ್ರಮ ಮನೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೇ ಮನೆ ಕಟ್ಟಿಕೊಂಡಿದ್ದ 47 ಕುಟುಂಬ ಬೀದಿಗೆ ಬೀಳುವಂತಾಗಿದೆ.
