ಹುಬ್ಬಳ್ಳಿ: ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ರೋಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆದಿದೆ.
18 ವರ್ಷದ ಆದರ್ಶ್ ಗೊಂದಕರ್ ಆತ್ಮಹತ್ಯೆಗೆ ಶರಣಾಗಿರುವ ರೋಗಿ. ಹುಬ್ಬಳ್ಳಿಯ ನೇಕಾರ ನಗರದ ನಿವಾಸಿ. ಆದರ್ಶ್ ತೀವ್ರ ಜ್ವರದಿಂದ ಬಳಲುತ್ತಿದ್ದರು. ರಕ್ತದ ಪ್ಲೇಟ್ಲೆಟ್ ಕೂಡ ಕಡಿಮೆಯಾಗಿತ್ತು. ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಆದರ್ಶ್ ಇದ್ದಕ್ಕಿದ್ದಂತೆ ಆಸ್ಪತ್ರೆಯ ಮೂರನೆ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾರೆ.
ಮುಂಜಾನೆ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ವಾರ್ಡ್ ನಲ್ಲಿದ್ದ ಸಿಬ್ಬಂದಿ ಕಣ್ತಪ್ಪಿಸಿ ಮೂರನೆ ಮಹಡಿಗೆ ತೆರಳಿ ಅಲ್ಲಿನ ಕಿಟಕಿಯಿಂದ ಜಿಗಿದಿದ್ದಾರೆ. ತಲೆ ಹಾಗೂ ಯಕೃತ್ತಿಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಡಾ.ರಾಜಶೇಖರ್ ದ್ಯಾಬೇರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಕೆ ಎಂಸಿಆರ್ ಐ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ತಿಳಿಸಿದ್ದಾರೆ.