ಧಾರವಾಡ: ನಿಗದಿತ ವೇತನ ನೀಡದೇ ಕಡಿಮೆ ಸಂಬಳ ನೀಡಿ ಹಿಂಸಿಸುತ್ತಿದ್ದ ಗುತ್ತಿಗೆದಾರನ ಕಾಟಕ್ಕೆ ಬೇಸತ್ತ ಪೌರಕಾರ್ಮಿಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಕೃಷ್ಣ ವೆಗ್ಗಣ್ಣವರ್ ಆತ್ಮಹತ್ಯೆಗೆ ಯತ್ನಿಸಿರುವ ಪೌರಕಾರ್ಮಿಕ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಸರ್ಕಾರ ತಿಂಗಳಿಗೆ 18,000 ರೂಪಾಯಿ ವೇತನ ನೀಡುತ್ತಿದೆ. ಆದರೆ ಮಹಾನಗರಪಾಲಿಗೆಗೆ ಬರುವ ವೇತನವನ್ನು ಕಡಿತ ಮಾಡುತ್ತಿದ್ದ ಗುತ್ತಿಗೆದಾರ, ಕೇವಲ 8000 ರೂಪಾಯಿಯನು ಮಾತ್ರ ಇವರಿಗೆ ಪಾವತಿಸುತ್ತಿದ್ದ. ರಜೆ ಮಾಡಿದರೆ ಆ ಹಣದಲ್ಲಿಯೂ ಕಟ್ ಮಾಡಿಕೊಳ್ಳುತ್ತಿದ್ದರಂತೆ. ದುಡಿದ ಕೆಲಸಕ್ಕೆ ಸರಿಯಾಗಿ ವೇತನ ನೀಡದಿರುವುದಕ್ಕೆ ಮನನೊಂದ ಕೃಷ್ಣ ವೆಗ್ಗಣ್ಣವರ್ ವಿಷ ವೇಸಿದ್ದಾರೆ.
ತೀವ್ರ ಗಂಭಿರ ಸ್ಥಿತಿ ತಲುಪಿದ ಕೃಷ್ಣ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೃಷ್ಣ ಅವರು ಕಳೆದ 15 ವರ್ಷಗಳಿಂದ 17ನೇ ವಾರ್ಡ್ ನಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳಿಂದ ಅವರಿಗೆ ವೇತನವನ್ನೂ ನೀಡಿರಲಿಲ್ಲ ಎಂದು ಪತ್ನಿ ಆರೋಪಿಸಿದ್ದಾರೆ.
ಘಟನೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮೇಯರ್ ಜ್ಯೋತಿ ಪಾಟೀಲ್, ಗುತ್ತಿಗೆದಾರ ಇದೇ ರೀತಿ ಹಲವು ಪೌರಕಾರ್ಮಿಕರಿಗೆ ತೊಂದರೆ ನೀಡಿರುವ ದೂರು ಬಂದಿದೆ. ನಿಗದಿತ ಸಂಬಳ ನೀಡದೇ ವೇತನ ಕಟ್ ಮಾಡಿ ಕೊಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ. ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.