ಬೆಂಗಳೂರು: ವಾಹನ ಮಾಲೀಕರೇ ಅನಧಿಕೃತವಾಗಿ HSRP ನಂಬರ್ ಪ್ಲೇಟ್ ಹಾಕಿಕೊಂಡಿದ್ದಲ್ಲಿ ದಂಡ ಬೀಳಲಿದೆ. ನಕಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿದ್ದರೆ ದಂಡ ಬೀಳುವುದು ನಿಶ್ಚಿತವಾಗಿದೆ.
ವಾಹನ ಉತ್ಪಾದಕ ಕಂಪನಿಗಳ ಅಧಿಕೃತ ಡೀಲರ್ ಗಳಿಗೆ HSRP ನಂಬರ್ ಪ್ಲೇಟ್ ಜೋಡಣೆ ಕಾರ್ಯ ಕೊಡಲಾಗಿದೆ. ರಾಜ್ಯಾದ್ಯಂತ ಸುಮಾರು 4 ಸಾವಿರಕ್ಕೂ ಅಧಿಕ ಡೀಲರ್ ಪಾಯಿಂಟ್ ಗಳನ್ನು ಗುರುತಿಸಲಾಗಿದೆ.
ಕೆಲವರು ಸರ್ಕಾರದ ಕಡ್ಡಾಯ ನಿಯಮ ದುರ್ಬಳಕೆ ಮಾಡಿಕೊಂಡು ವಾಹನ ಮಾಲೀಕರಿಗೆ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಮೆಕಾನಿಕ್ ಶಾಪ್, ಸಣ್ಣಪುಟ್ಟ ಅಂಗಡಿಗಳಲ್ಲಿಯೂ HSRP ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ಹಣ ಮಾಡಲಾಗುತ್ತಿದೆ.
HSRP ನಂಬರ್ ಪ್ಲೇಟ್ ಗಳಲ್ಲಿ ಲೇಸರ್ ತಂತ್ರಜ್ಞಾನದ ಮೂಲಕ ಸಂಖ್ಯೆ ಮುದ್ರಿಸಲಾಗಿರುತ್ತದೆ. ಪ್ರತಿ ನಂಬರ್ ಪ್ಲೇಟ್ ಗೆ ಒಂದು ಸೀರಿಯಲ್ ನಂಬರ್ ಕೊಡಲಾಗುತ್ತದೆ. ಆದರೆ ಅನಧಿಕೃತ ವ್ಯಕ್ತಿಗಳಿಂದ ಖರೀದಿಸುವ HSRP ನಂಬರ್ ಪ್ಲೇಟ್ ಗಳಲ್ಲಿ ಸೀರಿಯಲ್ ಸಂಖ್ಯೆ ಇರುವುದಿಲ್ಲ. ಇಂತಹ HSRP ಫಲಕಗಳನ್ನು ಅಳವಡಿಸಿದ್ದಲ್ಲಿ ದಂಡ ಪಾವತಿಸಬೇಕು ಮಾತ್ರವಲ್ಲ, ಹೊಸದಾಗಿ HSRP ನಂಬರ್ ಪ್ಲೇಟ್ ಖರೀದಿಸಿ ಅಳವಡಿಸಬೇಕಿದೆ.