ತೆಲಂಗಾಣ: ಯೋಗ ಶಿಕ್ಷಕರೊಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದ ಗ್ಯಾಂಗ್ ವೊಂದು 2 ಕೋಟಿ ಹಣ ಇಲ್ಲವೇ 2 ಎಕರೆ ಭೂಮಿಗಾಗಿ ಬೇಡಿಕೆ ಇಟ್ಟ ಘಟನೆ ಹೈದರಾಬಾದ್ ನ ಗೋಲ್ಕೊಂಡದಲ್ಲಿ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಪ್ರಮುಖ ಆರೋಪಿ ಅಮರ್ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಹಣ ಇರುವವರನ್ನು ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಖೆಡ್ದಾಗೆ ಕೆಡವುತ್ತಿದ್ದ. ಇದೇ ರೀತಿ ಹನಿಟ್ರ್ಯಾಪ್ ಮಾಡಿ ಯೋಗ ಶಿಕ್ಷಕರೊಬ್ಬರನ್ನು ಖೆಡ್ದಾಗೆ ಬೀಳಿಸಿದ್ದ. ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದ 55 ವರ್ಷದ ಯೋಗಗುರು, ತಮ್ಮ ಜಮೀನಿನಲ್ಲಿ ತಮ್ಮದೇ ಯೋಗ ಕೇಂದ್ರವನ್ನು ಸ್ಥಾಪಿಸಿ ಯೋಗ ಕಾರ್ಯಕ್ರಮ ನಡೆಸುತ್ತಿದ್ದರು. ವಸತಿ ಸೌಲಭ್ಯಗಳೊಂದಿಗೆ ತರಬೇತಿ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಇದನ್ನು ನೋಡಿದ್ದ ಅಮರ್ ಗ್ಯಾಂಗ್ ಯೋಗ ಶಿಕ್ಷಕರನ್ನು ಹನಿಟ್ರ್ಯಾಪ್ ಜಾಲದಲ್ಲಿ ಬೀಳಿಸಲು ಸಂಚು ರೂಪಿಸಿತ್ತು.
ರಜನಿ ಹಾಗೂ ಮಂಜು ಎಂಬುವವರನ್ನು ಯೋಗ ಕೇಂದ್ರಕ್ಕೆ ಕರೆದುಕೊಂಡು ಬಂದು ಇವರಿಬ್ಬರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಯೋಗದ ಮೂಲಕ ಸಮಸ್ಯೆ ಪರಿಹರಿಸುವಂತೆ ಅಮರ್ ಕೇಳಿದ್ದ. ಅದಕ್ಕೆ ಒಪ್ಪಿದ್ದ ಯೋಗಗುರು ಇಬ್ಬರನ್ನೂ ಯೋಗಕೇಂದ್ರಕ್ಕೆ ಸೇರಿಸಿಕೊಂಡಿದ್ದರು. ಯೋಗದ ವೇಳೆ ರಜನಿ ಯೋಗ ಶಿಕ್ಷಕರಿಗೆ ಅಡುಗೆ ಸಹಾಯ ಮಾಡುವುದಾಗಿ ಹೇಳಿ ಹತ್ತಿರವಾಗಿದ್ದಳು. ಹೀಗೆ ಆರಂಭವಾದ ಯೋಗ ಶಿಕ್ಷಕ ಹಾಗೂ ರಜನಿ ಸ್ನೇಹ ಹೋಟೆಲ್ ಸುತ್ತಾಟದವರೆಗೂ ಸಾಗಿತ್ತು. ಅಲ್ಲದೇ ಏಕಾಂತ ಸಮಯ ಕಳೆಯಲು ಹೋಟೆಲ್ ರೂಮ್ ಗೆ ತೆರಳಿದ್ದರು. ರಜನಿ ತನ್ನ ಬಟ್ಟೆಯಲ್ಲಿ ಸ್ಪೈ ಕ್ಯಾಮರಾ ಧರಿಸಿ ಯೋಗಶಿಕ್ಷಕನೊಂದಿಗಿರುವ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಳು.
ವಿಡಿಯೋದೊಂದಿಗೆ ಗ್ಯಾಂಗ್ ಕೆಲ ದಿನಗಳ ಹಿಂದೆ ಯೋಗ ಶಿಕ್ಷಕನನ್ನು ಭೇಟಿಯಾಗಿ 2 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿತ್ತು. ಇಲ್ಲವೇ 2 ಎಕರೆ ಭೂಮಿ ನಿಡುವಂತೆ ಕೇಳಿದ್ದರು. ಇದರಿಂದ ಯೋಗಗುರು ಶಾಕ್ ಆಗಿದ್ದ. ಇಲ್ಲವಾದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಲಕ್ಷಾಂತರ ರೂಪಾಯಿ ಹಣ ಪಾವತಿಸಿದ್ದ ಬಳಿಕ ಕೆಲ ದಿನ ಸುಮ್ಮನಾಗಿದ್ದ ಗ್ಯಾಂಗ್ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಯೋಗಗುರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದ್ದಾರೆ. ಅಮರ್, ರಾಜೇಶ್, ಮೌಲಾಲಿ, ರಜನಿ ರೆಡ್ಡಿ, ಮಂಜುಳಾ ಬಂಧಿತ ಆರೋಪಿಗಳು.