ಉಡುಪಿ: ವ್ಯಕ್ತಿಯೋರ್ವರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಹಲ್ಲೆ ನಡೆಸಿ, ಹಣ ದೋಚಿದ್ದ ಗ್ಯಾಂಗ್ ನನ್ನು ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ನಾವುಂಡ ಬಡಾಕೆರೆಯ ಸವದ್ ಯಾನೆ ಅಚ್ಚು, ಗುಲ್ವಾಡಿ ಗಾಂಧಿಕಟ್ಟೆಯ ಸೈಫುಲ್ಲಾ, ಮೊಹಮ್ಮದ್ ನಾಸಿರ್, ಅಬ್ದುಲ್ ಸತ್ತಾರ್, ಅಬ್ದುಲ್ ಅಝೀಜ್, ಕುಂದಾಪುರ ಮೂಲದ ಅಸ್ಮಾ ಬಂಧಿತ ಆರೋಪಿಗಳು.
ಈ ಗ್ಯಾಂಗ್ ಸಂದೀಪ್ ಕುಮಾರ್ ಎಂಬಾತನನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಹಣ ದೋಚಿ ಬೆದರಿಕೆಯೊಡ್ಡಿತ್ತು. ಸಂದೀಪ್ ಕುಮಾರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಂದೀಪ್ ಕುಮಾರ್ ಮೂರು ತಿಂಗಳ ಹಿಂದೆ ಕುಂದಾಪುರಕ್ಕೆ ಆಗಮಿಸಿದ್ದರು. ಈ ವೇಳೆ ಆರೋಪಿ ಸವದ್ ನ ಪರಿಚಯವಾಗಿತ್ತು. ಆತ ಉಳಿದ ಆರೋಪಿಗಳನ್ನು ಪರಿಚಯಿಸಿದ್ದ. ಅಲ್ಲದೇ ಅಸ್ಮಾ ಎಂಬ ಮಹಿಳೆಯನ್ನೂ ಪರಿಚಯ ಮಾಡಿಕೊಟ್ಟಿದ್ದ. ಸಂದೀಪ್ ಕುಮಾರ್ ಅಸ್ಮಾ ಫೋನ್ ನಂಬರ್ ಪಡೆದು ಆಕೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡ ಅಸ್ಮಾ, ಸಂದೀಪ್ ಕುಮಾರ್ ನನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಾಳೆ.
ಸೆ.2ರಂದು ಸಂಜೆ ಅಸ್ಮಾ, ಸಂದೀಪ್ ಗೆ ಕರೆ ಮಾಡಿ ಕುಂದಾಪುರಕ್ಕೆ ಬರುವಂತೆ ಹೇಳಿದ್ದಾಳೆ. ಅಸ್ಮಾ ಮಾತು ಕೇಳಿ ಸಂದೀಪ್, ಕುಂದಾಪುರಕ್ಕೆ ಹೋಗಿದ್ದು, ಈ ವೇಳೆ ಅಸ್ಮಾ ಕೋಟೆಶ್ವರದಲ್ಲಿನ ತನ್ನ ಬಾಡಿಗೆ ಮನೆಗೆ ಕರೆದೊಯ್ದಿದ್ದಾಳೆ. ಸಂದೀಪ್ ಹಾಗೂ ಅಸ್ಮಾ ಮನೆಯಲ್ಲಿದ್ದಾಗ ಸವದ್ ಸೇರಿ ಉಳಿದ ಆರೋಪಿಗಳು ಎಂಟ್ರಿಕೊಟ್ಟಿದ್ದಾರೆ. ಸಂದೀಪ್ ಮೇಲೆ ಹಲ್ಲೆ ನಡೆಸಿ 40 ಸಾವಿರ ಹಣ ಡ್ರಾ ಮಾಡಿಸಿಕೊಂಡಿದ್ದಾರೆ. ಆತನ ಕೈಲಿದ್ದ 6 ಸಾವಿರ ಹಣವನ್ನೂ ಕಿತ್ತುಕೊಂಡಿದ್ದಾರೆ. ಮಾತ್ರವಲ್ಲ ಸಂದೀಪ್ ಪರಿಚಯದವ ಬಳಿಯಿಂದ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದಾರೆ. ಬಳಿಕ ರಾಡ್ ನಿಂದ ಸಂದೀಪ್ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿ ಮನೆಯಿಂದ ಆಚೆ ಅಟ್ಟಿದ್ದಾರೆ.
ಕೆಟ್ಟ ಮೇಲೆ ಬುದ್ಧಿಬಂತು ಎಂಬಂತೆ ಸಂದೀಪ್ ಕುಮಾರ್ ಕುಂದಾಪುರ ಠಾಣೆಗೆ ತೆರಳಿ ದೂರು ನೀಡಿದ್ದು, ಸದ್ಯ ಮಹಿಳೆ ಸೇರಿ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.