ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ರಂದು ಶಿವಮೊಗ್ಗದ ನಗರದ ಅಂಗನವಾಡಿ, 1ರಿಂದ 10ನೇ ತರಗತಿಯವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ.
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು, ಜನ ಆಗಮಿಸಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ.
ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ. ಹಿಂದೂ ಮಹಾಸಭಾ ಗಣಪತಿ ಸಾಗುವ ಪ್ರಮುಖ ರಸ್ತೆಗಳು ಸೇರಿದಂತೆ ವಿವಿಧ ರಸ್ತೆಗಳು, ವೃತ್ತಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ.
ಶಿವಮೊಗ್ಗ ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಶನಿವಾರ ನಡೆಯಲಿದ್ದು, ಇಡೀ ನಗರವನ್ನು ಅದ್ದೂರಿಯಾಗಿ ಸಿಂಗರಿಸಲಾಗಿದೆ.
ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ನಗರದ ಪ್ರಮುಖ ವೃತ್ತಗಳು ರಸ್ತೆಗಳನ್ನು ವಿವಿಧ ಕಲಾ ಕೃತಿಗಳ ಮೂಲಕ ಅಲಂಕರಿಸಲಾಗಿದೆ. ಕೇಸರಿ ಬಂಟಿಂಗ್ ಗಳನ್ನು ಕಟ್ಟಲಾಗಿದ್ದು, ಶಿವಮೊಗ್ಗ ನಗರ ಕೇಸರಿಮಯವಾಗಿದೆ.
ಹಿಂದೂ ಮಹಾಸಭಾ ಗಣಪತಿಯ ರಾಜ ಬೀದಿ ಉತ್ಸವಕ್ಕೆ ನಗರ ಮಾತ್ರವಲ್ಲದೇ ವಿವಿಧೆಡೆಯಿಂದ, ಅಪಾರ ಸಂಖ್ಯೆಯ ಜನ ಆಗಮಿಸಲಿದ್ದು, ತಿಂಡಿ, ಪಾನೀಯ ಸಿಹಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಲ್ಲಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಗಾಂಧಿ ಬಜಾರ್ ಮುಂಭಾಗ ಪ್ರತಿ ವರ್ಷದಂತೆ ಈ ಬಾರಿಯು ವಿಭಿನ್ನ ಮಹಾದ್ವಾರ ಸ್ಥಾಪಿಸಲಾಗಿದೆ. ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಅಮೃತಕ್ಕಾಗಿ ಹಾಲಿನ ಸಮುದ್ರವನ್ನು ಸಮುದ್ರ ಮಂಥನ ಕಲಾಕೃತಿ ನೋಡುಗರನ್ನು ಆಕರ್ಷಿಸುತ್ತಿದೆ.