ಚಿತ್ರದುರ್ಗ: ತಮ್ಮನಿಗೆ ಹೆಚ್.ಐ.ವಿ ಸೋಂಕು ಎಂದು ತಮ್ಮನನ್ನೇ ಕತ್ತು ಹಿಸುಕಿ ಅಕ್ಕ-ಭಾವ ಹತ್ಯೆ ಮಾಡಿರುವ ಅಮಾನುಷ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗದ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಯುವಕನೊಬ್ಬ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನ ಕಾಲಿಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣಕ್ಕೆ ಆಪರೇಷನ್ ಮಾಡುವ ಅಗತ್ಯವಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಯುವಕನ ತಪಾಸಣೆ ನಡೆಸಿದ ವೈದ್ಯರು ಆತನಿಗೆ ಹೆಚ್ ಐವಿ ಇದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ಆತನಿಗೆ ಹೆಚ್ ಐವಿ ಇದೆ ಎಂದು ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಅಲ್ಲದೇ ಕಾಲಿನ ಆಪರೇಷನ್ ಗಾಗಿ ಯುವಕನನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಬೇಕು ಎಂದು ಹೇಳಿದ್ದರು. ತಮ್ಮನಿಗೆ ಹೆಚ್ ಐವಿ ಇದೆ ಎಂಬುದು ಗೊತ್ತಾಗುತ್ತಿದ್ದಂತೆ ಅಕ್ಕನಿಗೆ ಸಹಿಸಿಕೊಳ್ಳಲಾಗಿಲ್ಲ. ಮರ್ಯಾದೆ ಪ್ರಶ್ನೆ ಎಲ್ಲಿ ಎಲ್ಲರಿಗೂ ವಿಷಯ ಗೊತ್ತಾಗಿಬಿಡುತ್ತೋ ಎಂದು ತಮ್ಮನ ಹತ್ಯೆ ಮಾಡಿದ್ದಾಳೆ.
ಮಣಿಪಾಲ್ ಆಸ್ಪತ್ರೆಗೆ ಆಪರೇಷನ್ ಗಾಗಿ ತಮ್ಮನನ್ನು ಆಂಬುಲೆನ್ಸ್ ನಲ್ಲಿ ಶಿಫ್ಟ್ ಮಾಡುತ್ತಿದ್ದಾಗ ಮಾರ್ಗ ಮಧ್ಯೆಯೇ ಅಕ್ಕ-ಭಾವ ತಮ್ಮನ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ಬಳಿಕ ಮೃತದೇಹವನ್ನು ದುಮ್ಮಿ ಗ್ರಾಮಕ್ಕೆ ತಂದಿದ್ದಾರೆ. ಮೃತದೇಹದ ಕತ್ತಿನಲ್ಲಿ ಗಾಯ, ಹಲ್ಲೆಯಂತಹ ಗುರುತು ಕಂಡು ಬಂದಿರುವುದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತ ಯುವಕನ ತಂದೆ ಹೊಳಲ್ಕೆರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕೊಲೆ ರಹಸ್ಯ ಬಯಲಾಗಿದೆ. ಅಕ್ಕ-ಭಾವನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.